ಧಾರವಾಡ: ತಾಲೂಕಿನ ಬೋಗೂರ ಗ್ರಾಮದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಮನೆಗೆ ಹಾಗೂ ಮಾದನಭಾವಿ ಪ್ರಕರಣದ ಸಂತ್ರಸ್ತರ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಗುರುವಾರ ಭೇಟಿ ನೀಡಿ ಬಾಲಕಿಯರ ಕುಟುಂಬಗಳ ದ ಅಳಲು ಆಲಿಸಿ, ಸಾಂತ್ವನ ಹೇಳಿದರು.
ಬೋಗೂರಿನಲ್ಲಿ ಮೃತ ಬಾಲಕಿಯ ತಾಯಿ ಲಲಿತಾ, ತಂದೆ ಪೂರ್ಣಾನಂದ ಕಂಬಿಮಠ ಅವರು ಮಗಳ ದುಸ್ಥಿತಿ ಮತ್ತು ಆತ್ಮಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಗೆ ಮನವಿ ಮಾಡಿದರು. ಈ ವೇಳೆ ಸಂತ್ರಸ್ತ ಕುಟುಂಬಕ್ಕೆ ತುರ್ತು ವೆಚ್ಚವಾಗಿ ರೂ.೧೦ ಸಾವಿರ ನೆರವಿನ ಚೆಕ್ ನೀಡಲಾಯಿತು.
ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಮಾತನಾಡಿ, ತಾಲೂಕಿನ ಬೋಗೂರು-ಮಾದನಭಾವಿ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ನಡೆದ ಎರಡು ಕೃತ್ಯಗಳಲ್ಲಿ ನೊಂದ ಕುಟುಂಬಗಳ ಜತೆ ಆಯೋಗ, ಸರ್ಕಾರ ಇದೆ. ಆಪ್ತ ಸಮಾಲೋಚನೆಯಿಂದ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ಹಾಗೂ ಸೂಕ್ತ ಕಾನೂನು ನೆರವು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ನೊಂದ ಕುಟುಂಬದ ಭದ್ರತೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ಸೇರಿದೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಲ್ಲ. ಮಾದನಭಾವಿ ಪ್ರಕರಣದಲ್ಲೂ ಓರ್ವ ವ್ಯಕ್ತಿ ಬಂಧಿಸಿದೆ. ಇನ್ನುಳಿದ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯುವುದಾಗಿ ತಿಳಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಡಿವೈಎಸ್ ರವಿ ನಾಯಕ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲಲಿತಾ, ರಾಜೇಶ್ವರಿ ಅಳಗವಾಡಿ, ಸಿಪಿಐ ಎಸ್.ಸಿ.ಪಾಟೀಲ, ಪಿಎಸ್ಐ ಪ್ರಸಾದ ಫಣಿಕರ್ ಇದ್ದರು.