ಹುಬ್ಬಳ್ಳಿ: ನನ್ನನ್ನು ಸಂಪುಟದಿಂದ ಕೈ ಬಿಡುತ್ತಾರೆ ಎನ್ನುವ ಸುದ್ದಿ ಕೇವಲ ಊಹಾಪೋಹ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಹಿನ್ನೆಲೆ ನೋಡಿ ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಸಂಘಟನೆಯಿಂದ ಬಂದವಳು. ಸಾಮಾನ್ಯ ಕಾರ್ಯಕರ್ತಳಾಗಿ, ಎರಡು ಬಾರಿ ಶಾಸಕಿಯಾಗಿ ಪಕ್ಷ ಕಟ್ಟಿದ್ದೇನೆ. ನನ್ನ ಪ್ರಾಮಾಣಿಕತೆ ಗುರುತಿಸಿ ಜವಾಬ್ದಾರಿ ನೀಡಿದೆ. ಅಲ್ಲದೇ ಮಹಿಳಾ ಶಾಸಕರಲ್ಲಿ ನಾನೊಬ್ಬಳೇ ಹಿರಿಯಳಿದ್ದೇನೆ ಆದ್ದರಿಂದ ನನ್ನನ್ನು ಸಚಿವ ಸಂಪುಟದಿಂದ ಕೈ ಬಿಡುವುದು ಊಹಾಪೋಹ ಅಷ್ಟೇ. ಪಕ್ಷ ಹೇಳಿದಂತೆ ನಡೆದುಕೊಂಡಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದರು.
ಬೆಳಗಾವಿ ಬಂಡಾಯದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಹಿರಿಯರು ಆ ಬಗ್ಗೆ ಯೋಚನೆ ಮಾಡುತ್ತಾರೆ. ಅದು ಮನೆಯ ಜಗಳ, ಮನೆ ಅಂದ ಮೇಲೆ ಜಗಳ ಇರುತ್ತದೆ. ಅದನ್ನು ಹಿರಿಯರು ಬಗೆಹರಿಸುತ್ತಾರೆ ಎಂದರು.