ಹೊಸದಿಲ್ಲಿ: ವಲಸೆ ಕಾರ್ಮಿಕರು, ಹಿರಿಯ ನಾಗರಿಕರ ಅಭಿವೃದ್ಧಿ ಮತ್ತು ಜನತೆಗೆ ಸುಲಭದಿ ಸಾಲಸೌಲಭ್ಯ ಒದಗುವಂತೆ ಮಾಡುವುದು, ಮೀನುಗಾರಿಕೆ ವಲಯಲ್ಲಿ ಭಾರೀ ಪ್ರಮಾಣದ ಅವಕಾಶಗಳನ್ನು ಸೃಷ್ಟಿಸುವುದು ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ತೀರ್ಮಾನಗಳಾಗಿದ್ದು, ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪುಷ್ಟಿ ನೀಡಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಮೀನುಗಾರಿಕೆ ವಲಯದಲ್ಲಿ ಕ್ರಾಂತಿಯನ್ನುಂಟುಮಾಡಲಿದೆ. ಇತ್ತೀಚಿನ ತಂತ್ರಜ್ಞಾನ, ಮೂಲಸೌಕರ್ಯಗಳನ್ನು ಬಲಗೊಳಿಸುವ ಜೊತೆಗೆ ಹಣಕಾಸಿನ ನೆರವು ನೀಡುತ್ತದೆ.ನಮ್ಮ ಶ್ರಮಶೀಲ ಮೀನುಗಾರರು ಇದರಿಂದ ಅಪಾರ ಪ್ರಯೋಜನ ಪಡೆಯಲಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಇನ್ನೊಂದು ಮಹತ್ವದ ನಿರ್ಧಾರ ಕೂಡಾ ಇದಕ್ಕೆ ಪುಷ್ಟಿ ನೀಡಲಿದೆ .ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟದ ನಿರ್ಧಾರವು ಸ್ವ-ಸಹಾಯ ಗುಂಪುಗಳು, ಸಹಕಾರಿ ಸಂಸ್ಥೆಗಳು ಮತ್ತು ಸೂಕ್ಷ್ಮ ಆಹಾರ ವ್ಯವಹಾರಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಮತ್ತು ಗ್ರಾಮೀಣ-ನಗರ ಸಮುದಾಯಗಳಿಗೆ ಬೃಹತ್ ಪ್ರಮಾಣದಲ್ಲಿ ಜೀವನೋಪಾಯವನ್ನು ನೀಡಲಿದೆ ಎಂಬುದಾಗಿ ಪ್ರಧಾನಿಯವರು ವಿವರಿಸಿದ್ದಾರೆ.