ಹೊಸ ದಿಗಂತ ವರದಿ, ಕಲಬುರಗಿ:
ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮಾಡುವುದು ಸಿಎಂ ಬಿ.ಎಸ್ ಯಡಿಯೂರಪ್ಪನವರ ಪರಮಾಧಿಕಾರವೆಂದು ಬೃಹತ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಈಗಾಗಲೇ ವರಿಷ್ಟರ ಜೊತೆಗೆ ಸಮಾಲೋಚನೆ ಮಾಡಿದ್ದಾರೆ. ಹೈಕಮಾಂಡ ಜೊತೆಗೂ ಕುಲಂಕುಷವಾಗಿ ಮಾತುಕತೆ ನಡೆಸಿದ್ದಾರೆ. ಅದರ ಜೊತೆಗೆ 6-7 ಜನರನ್ನು ಸಹ ಸಂಪುಟದಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ ಎಂದರು. ಹೀಗಾಗಿ ಮುಂದಿನ ನಿರ್ಣಯವನ್ನು ಅವರೇ ಕೈಗೊಳ್ಳಲಿದ್ದಾರೆ ಎಂದರು.
ಕಲಬುರಗಿ ಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದರ ಬಗ್ಗೆ ನಾನೇ ಖುದ್ದು ಈ ಬಾರಿ ಅವರ ಗಮನಕ್ಕೆ ತರುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಗ್ರಾ.ಪಂ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷ, ಅಧೋಗತಿಗೆ ತಲುಪಿದೆ. ಸೋಲು ಕಂಡರು ಸಹ ಸಂಕಲ್ಪ ಯಾತ್ರೆ ಮಾಡಲು ಹೊರಟಿದೆ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆಸಿ ಮೊದಲು ಒಂದಾಗಲಿ ಆಮೇಲೆ ಕಾಂಗ್ರೆಸ್ ಸಂಕಲ್ಪ ಯಾತ್ರೆಯನ್ನು ಮಾಡಲಿ ಎಂದರು. ನಮ್ಮ ಗ್ರಾಮ ಪಂಚಾಯತಿ ಪ್ರತಿ ಸದಸ್ಯನು ಮೋದಿ ಅವರ ಹಾಗೇ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ
ಕಳೆದ 20 ವರ್ಷದಿಂದ ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಕಳೆದ ಭಾರಿ ಕಲಬುರಗಿ ಜಿಲ್ಲೆಯ ಯಾರೋಬ್ಬರಿಗೂ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಹೀಗಾಗಿ ಈ ಭಾರಿ ಜಿಲ್ಲೆಗೆ ವಿಶೇಷವಾಗಿ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ. ಹೀಗಾಗಿ ನಾನೂ ಕೂಡ ಈ ಬಾರಿ ಆಕಾಂಕ್ಷಿಯಾಗಿದ್ದೇನೆ ಎಂದು ಜಿಲ್ಲೆಯ ಸೇಡಂ ತಾಲೂಕಿನ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದ್ದಾರೆ.