ಮಂಗಳೂರು: ಜಗದ್ವಿಖ್ಯಾತ ಮಂಗಳೂರು ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಈ ಬಾರಿಯೂ ಸಂಪ್ರದಾಯದಂತೆ ದಸರಾ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಕುದ್ರೋಳಿ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವವನ್ನು ನಿಲ್ಲಿಸಬಾರದು ಎಂದಿನಂತೆ ವೈಭವದಿಂದ ನಡೆಸಬೇಕು ಎಂದು ನಿರ್ಧರಿಸಲಾಗಿದೆ. ಇದು ಭಕ್ತರು, ಉದ್ಯಮಿಗಳು, ವ್ಯಾಪಾರಿಗಳು, ಹಿತೈಷಿಗಳ ವಲಯಗಳ ಅಭಿಪ್ರಾಯವೂ ಆಗಿದೆ. ಈ ಕಾರಣದಿಂದ ಗಂಭೀರವಾಗಿ ಅಲೋಚಿಸಿದ ಆಡಳಿತ ಮಂಡಳಿ ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕ ದಸರಾ ನಡೆಸಲು ನಿರ್ಧರಿಸಿದೆ ಅವರು ತಿಳಿಸಿದರು.
ದಸರಾ ಮಹೋತ್ಸವದಲ್ಲಿ ಎಂದಿನಂತೆ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಕೆಲ ನಿರ್ಧಾರ ತೆಗೆದುಕೊಳ್ಳಲಿದೆ. ಇದಕ್ಕೆ ಭಕ್ತರ ಸಹಕಾರವೂ ಮುಖ್ಯವಾಗಿದೆ.
ಮೆರವಣಿಗೆಯಿಲ್ಲ: ಮಂಗಳೂರು ದಸರಾದಲ್ಲಿ ಈ ಬಾರಿ ಟ್ಯಾಬ್ಲೋ, ದೇವರ ಮೆರವಣಿಗೆಯಿಲ್ಲ. ಕ್ಷೇತ್ರವನ್ನು ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು. ಆದರೆ ನಗರದಲ್ಲಿ ಯಾವುದೇ ಅಲಂಕಾರ ನಡೆಸದಿರಲು ನಿರ್ಧರಿಸಲಾಗಿದೆ
ಎಂದು ಪೂಜಾರಿ ತಿಳಿಸಿದ್ದಾರೆ.