Thursday, August 11, 2022

Latest Posts

ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಭ್ರಮದ 105ನೇ ಜಯಂತಿ ಮಹೋತ್ಸವ

ಬೆಂಗಳೂರು: ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.‌ಯಡಿಯೂರಪ್ಪ ಅವರು ಗೃಹ ಕಛೇರಿ ಕೃಷ್ಣಾದಲ್ಲಿ‌ ವರ್ಚುವಲ್ ಮುಖಾಂತರ ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಾಸಿಂಹಾಸನ ಮಹಾಸಂಸ್ಥಾನ ಮಠದ ವತಿಯಿಂದ ಆಯೋಜಿಸಿರುವ ಶ್ರೀಮನ್ಮಹಾರಾಜ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105 ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದರು.
ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೆಯ ಜಯಂತಿ ಉತ್ಸವದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಮಹಾನ್ ಸಂತರು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು ದಾಸವೇರಣ್ಯರು ತಮ್ಮ ಬದುಕನ್ನು ಮಾನವನ ಉದ್ಧಾರಕ್ಕಾಗಿ ಮುಡಿಪಾಗಿಸಿ ಮಹಾಬೆಳಕಾದರು. ಇಂತಹ ಮಹಾನ್ ಸಂತರಲ್ಲಿ ಒಬ್ಬರಾದ ನಮ್ಮ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಲೋಕಕಲ್ಯಾಣಕ್ಕಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದರು.
ಕರೋನಾದ ಹಾವಳಿಯಿಂದ ಈ ಬಾರಿ ರಾಜೇಂದ್ರ ಶ್ರೀಗಳ ಜಯಂತಿ ಮಹೋತ್ಸವದಲ್ಲಿ ಆನ್‍ಲೈನ್ ಮೂಲಕ ಪಾಲ್ಗೊಂಡು ಪರಮಪೂಜ್ಯರ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಇದೊಂದು ಒಳ್ಳೆಯ ವೇದಿಕೆಯಾಗಿದೆ.ಅನ್ನ, ಅರಿವು, ಆರೋಗ್ಯ, ಸಮಾಜ ಸುಧಾರಣೆ, ಧರ್ಮಜಾಗೃತಿ, ಆಧ್ಯಾತ್ಮ ಕ್ಷೇತ್ರದಲ್ಲಿ ಜಗದ್ಗುರುಗಳು ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಜೆ.ಎಸ್.ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ನೀಡುವ ಮಹತ್ಕಾರ್ಯವನ್ನು ಮಠದ ವತಿಯಿಂದ ಮಾಡಲಾಗುತ್ತಿದೆ. ಈ ಸುಸಂದರ್ಭದಲ್ಲಿ ಶ್ರೀಗಳ ಜೀವನ ಮೌಲ್ಯಗಳು ಹಾಗೂ ಶ್ರೀಮಠದ ಸಾಧನೆಗಳನ್ನು ಬಿಂಬಿಸುವ ಕೃತಿಗಳು ಹಾಗೂ ಆನಿಮೇಷನ್ ಚಿತ್ರಗಳನ್ನು ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.
ಶ್ರೀಗಳು ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿದ್ದು, ಈ ಭಾಗದ ಜನರು ಸೌಹಾರ್ದಯುತವಾಗಿ ಬದುಕಲು ಸ್ಪೂರ್ತಿಯಾಗಿದ್ದಾರೆ. ಮಠದ ಅನ್ನ ದಾಸೋಹ, ಜ್ಞಾನ ದಾಸೋಹದಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಶತಮಾನಗಳಿಂದ ದೀನ ದಲಿತರು ಎಂಬ ಬೇಧಭಾವವಿಲ್ಲದೆ ದಾಸೋಹ ನಡೆಸಿ ಸಮ-ಸಮಾಜದ ನಿರ್ಮಾಣಕ್ಕೆ ಶ್ರೀ ಮಠ ಶ್ರಮಿಸಿದೆ. ಪರಮಪೂಜ್ಯ ರಾಜೇಂದ್ರ ಶ್ರೀಗಳವರ ಜಯಂತಿ ಮಹೋತ್ಸವದ ಈ ಸಂದರ್ಭದಲ್ಲಿ ವೈವಿಧ್ಯಮಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ರೀಮಠದ ಜನಪರ ಕಾಳಜಿಯ ಪ್ರತೀಕವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕು ಎನ್ನುವುದು ನನ್ನ ಆಶಯ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss