Friday, August 19, 2022

Latest Posts

ಸಂಸತ್ತಿನ ಗ್ರಂಥಾಲಯಕ್ಕೆ ಶತಮಾನದ ನಂತರ ಪ್ರಕಟವಾದ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿ

ಹೊಸ ದಿಗಂತ ವರದಿ, ಉಡುಪಿ:

ಶತಮಾನದ ನಂತರ ದೇಶದಲ್ಲಿ ಪ್ರಕಟವಾಗಿರುವ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ (ಸಂಸ್ಕೃತ, 24 ಸಂಪುಟಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ.
ಶ್ರೀಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್‌ನ ವತಿಯಿಂದ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರಕಟಗೊಂಡು, ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಅನೇಕ ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಲೋಕಾರ್ಪಣೆಗೊಂಡಿತ್ತು.
ಮಂಗಳವಾರ ದಿಲ್ಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಗ್ರಂಥದ ಪ್ರತಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಸಚಿವರೊಂದಿಗೆ ಅನೇಕ ವಿಷಯಗಳ ಚರ್ಚೆ ನಡೆಸಿದರು. ಸಚಿವರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು, ಭಕ್ತಿ ಗೌರವ ಅರ್ಪಿಸಿದರು. ಶ್ರೀಗಳೂ ಸಚಿವರಿಗೆ ಶ್ರೀಕೃಷ್ಣನ ಪ್ರಸಾದ, ಮಂತ್ರಾಕ್ಷತೆ ನೀಡಿ ಅಭಿನಂದಿಸಿದರು.
ಪೇಜಾವರ ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ, ಅನಂತ ಜಿ.ಎ., ಕೃಷ್ಣ ಭಟ್, ಪೇಜಾವರ ಮಠದ ದಿಲ್ಲಿ ಶಾಖೆಯ ವ್ಯವಸ್ಥಾಪಕ ದೇವೀಪ್ರಸಾದ್ ಭಟ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!