Sunday, August 14, 2022

Latest Posts

ಸಂಸ್ಕೃತ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು: ಸುತ್ತೂರು ಶ್ರೀ

ಹೊಸದಿಗತ ವರದಿ, ಮೈಸೂರು:

ಸಂಸ್ಕೃತ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಮೈಸೂರು ಜಿಲ್ಲೆಯ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮೈಸೂರು ಶ್ರೀ ಸುತ್ತೂರು ಶಾಖಾಮಠದಲ್ಲಿ ಏರ್ಪಡಿಸಿದ್ದ ‘ಸಂಸ್ಕೃತ-ಸoಸ್ಕೃತಿ’ ಉಪನ್ಯಾಸಮಾಲೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾಷೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಮ್ಯಾಕ್ಸ್ಮುಲ್ಲರ್ ಭಾರತವನ್ನು ಕುರಿತು ಭಾರತ ದೇಶ ನಾಶವಾದರೆ ಅದಕ್ಕೂ ಮೊದಲು ಇಡೀ ಜಗತ್ತೇ ನಾಶವಾಗುತ್ತದೆ ಎಂದಿದ್ದಾನೆ ಅಂದರೆ, ಭಾರತ ದೇಶ ನಾಶವಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು. ನೆಹರು ಅವರು ಸಂಸ್ಕೃತ ಭಾಷೆ ಮತ್ತು ಅದರ ವಾಙ್ಮಯವನ್ನು ನಮ್ಮ ದೇಶದ ಅಮೂಲ್ಯ ಖಜಾನೆ ಎಂದಿದ್ದಾರೆ. ಸಂಸ್ಕೃತ ತನ್ನೊಳಗೆ ಎಲ್ಲವನ್ನು ಗರ್ಭಿಕರಿಸಿಕೊಂಡಿದೆ. ಕಬ್ಬನ್ನು ನೇರವಾಗಿ ಆಸ್ವಾದಿಸುವುದು ಪ್ರಕೃತಿ. ಅದನ್ನು ರಸಮಾಡಿ ಸೇವಿಸುವುದು ಸಂಸ್ಕೃತಿಯಾಗುತ್ತದೆ. ಶರಣರ ವಚನಗಳಲ್ಲಿ ಸಂಸ್ಕೃತ ವಿಶೇಷವಾಗಿ ಬಳಕೆಯಾಗಿದೆ. ನಮ್ಮ ದೇಶದ ‘ಸರ್ವೇ ಜನಾ ಸುಖಿನೋ ಭವಂತು’ ಎನ್ನವಂತಹ ಅನೇಕ ಸಾತ್ವಿಕ ಸಂದೇಶಗಳು ಜಗತ್ತಿಗೆ ಕೊಟ್ಟ ಅಪರೂಪದ ಕಾಣಿಕೆಗಳು ಎಂದರು.

ಜಗತ್ತಿನಲ್ಲಿ ಯಾರು ದುಃಖಿತರಾಗಬಾರದು ಎನ್ನುವ ಸಂದೇಶ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮ ದೇಶದ ಮಹಾಕಾವ್ಯಗಳು, ಉಪನಿಷತ್ತುಗಳು, ದರ್ಶನಗಳು ಜಗತ್ತಿಗೆ ಸಾರ್ವಕಾಲಿಕವಾದ ಸತ್ಯವನ್ನೇ ನೀಡುವಂಥವು. ಕಂಪ್ಯೂಟರ್‌ಗೆ ಅತ್ಯಂತ ಸುಲಭವಾಗಿ ಅಳವಡಿಸಬಹುದಾದ ಭಾಷೆ ಸಂಸ್ಕೃತ ಎಂಬುದನ್ನು ವಿಜ್ಞಾನಿಗಳು ಕಂಡುಕೊAಡಿದ್ದಾರೆ. ಅಪೂರ್ವ ಮತ್ತು ವಿಶಿಷ್ಟವಾದ ಸಾಹಿತ್ಯವನ್ನು ಸಂಸ್ಕೃತ ಒಳಗೊಂಡಿದೆ. ಸುತ್ತೂರು ಶ್ರೀಕ್ಷೇತ್ರದ ಶಾಲೆಯಲ್ಲಿ ಪ್ರತಿನಿತ್ಯದ ಪ್ರಾರ್ಥನೆಯಲ್ಲಿ ವಚನಗಳ ಜೊತೆಗೆ ಉಪನಿಷತ್ತಿನ ಮಂತ್ರಗಳು ಹಾಗೂ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲು ಮತ್ತು ಸಂಸ್ಕೃತ ಹಾಗೂ ವೇದಾಧ್ಯಯನಕ್ಕೂ ಅವಕಾಶ ನೀಡಲಾಗಿದೆ. ಭಾರತೀಯ ಸಂಸ್ಕೃತಿಯ ಕುರಿತು ವಿಶೇಷವಾದ ಪಠ್ಯವನ್ನು ರಚಿಸಿ ಬೋಧಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿ ಸದಸ್ಯ ಟಿ.ಎನ್. ಪ್ರಭಾಕರ್, ವಿದ್ವಾಂಸ ಎಚ್.ವಿ. ನಾಗರಾಜರಾವ್, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ, ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ. ರಾಮಕೃಷ್ಣ ಭಟ್, ಕುಲಸಚಿವ ಡಾ. ವೀರನಾರಾಯಣ ಪಾಂಡುರoಗಿ, ವಿಶ್ರಾಂತ ಕುಲಪತಿ ಡಾ. ಪದ್ಮಾ ಶೇಖರ್, ಸಹಾಯಕ ಪ್ರಾಧ್ಯಾಪಕ ಡಾ. ಶರತ್‌ ಚಂದ್ರ ಸ್ವಾಮಿ, ಸಹಾಯಕ ಕುಲಸಚಿವ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss