ಕೋಲಾರ: ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲದ ಕಂತನ್ನು ಸಕಾಲಕ್ಕೆ ಪಾವತಿಸಿದರೆ ಮಾತ್ರವೇ ಶೂನ್ಯಬಡ್ಡಿ ಯೋಜನೆಯ ಪ್ರಯೋಜನ ಸಿಗುತ್ತದೆ ತಪ್ಪಿದಲ್ಲಿ ಬಡ್ಡಿಯ ಹೊರೆ ಬೀಳುತ್ತದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ಶನಿವಾರ ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಅಣ್ಣಿಹಳ್ಳಿ ಎಸ್ಎಫ್ಸಿಎಸ್ ವ್ಯಾಪ್ತಿಯಲ್ಲಿನ ರೈತರಿಗೆ 98.70 ಲಕ್ಷ ರೂ ಬೆಳೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ರೈತರಿಗೆ 3 ಲಕ್ಷದವರೆಗೂ ಬೆಳೆಸಾಲ, ಮಹಿಳಾ ಸಂಘಗಳಿಗೆ ೫ ಲಕ್ಷ ರೂ ಸಾಲವೂ ಶೂನ್ಯಬಡ್ಡಿ ಯೋಜನೆಯ ಸಾಲವಾಗಿದ್ದು, ಉಳಿದಂತೆ ಕುರಿ,ಕೋಳಿ,ರೇಷ್ಮೆ ಹುಳು ಸಾಕಾಣಿಕೆಗೆ ಸಿಗುವ ಸಾಲ ಮಧ್ಯಮಾವಧಿ ಸಾಲವಾಗಿದ್ದು, ಕೇವಲ ಶೇ.೩ ರ ಬಡ್ಡಿ ಸಾಲವಾಗಿದೆ ಎಂದರು.
ರೈತರು, ತಾಯಂದಿರು ಸಕಾಲಕ್ಕೆ ಸಾಲ ಪಾವತಿಸದಿದ್ದಲ್ಲಿ ಬಡ್ಡಿಯ ಹೊರೆ ಬೀಳುತ್ತದೆ, ಈ ನಿಟ್ಟಿನಲ್ಲಿ ಸಾಲ ಮರುಪಾವತಿಗೆ ಎಚ್ಚರಿಕೆ ಇರಲಿ ಎಂದು ಕಿವಿಮಾತು ಹೇಳಿದರು.
ಸಾಲ ಮನ್ನಾ ಮತ್ತಿತರ ವದಂತಿಗಳಿಗೆ ಕಿವಿಗೊಡದಿರಿ, ಹಾಗೆಯೇ ಸರ್ಕಾರ ಇದೀಗ ಕಂತು ಪಾವತಿಗೆ ನೀಡಿರುವ ಅವಕಾಶದಿಂದಲೂ ನಿಮಗೆ ಬಡ್ಡಿ ಹೊರೆಯಾಗುತ್ತದೆ ಎಂಬ ಸತ್ಯ ಅರಿತು ಸಕಾಲಕ್ಕೆ ಮರುಪಾವತಿಸಿ ಎಂದರು.
ಸಕಾಲಕ್ಕೆ ಸಾಲ ಮರುಪಾವತಿಸಿದರೆ ರಾಜ್ಯ ಹಾಗೂಕೇಂದ್ರ ಸರ್ಕಾರದ ಬಡ್ಡಿ ಯೋಜನೆಗಳ ಪ್ರೋತ್ಸಾಹಧನವೂ ಸಿಗುತ್ತದೆ ಎಂದ ಅವರು, ನಿಮ್ಮದೇ ಬ್ಯಾಂಕ್, ಅದನ್ನು ಪೋಷಿಸುವ ಹೊಣೆಯೂ ನಿಮ್ಮದೇ ಎಂದರು.
ಡಿಸಿಸಿ ಬ್ಯಾಂಕ್ ಪ್ರತಿಕುಟುಂಬಕ್ಕೂ ಸಾಲ ನೀಡುವ ಬದ್ದತೆ ಹೊಂದಿದೆ, ರೈತರು,ಮಹಿಳೆಯರು, ಹಾಲು ಉತ್ಪಾದಕರು ತಮ್ಮ ಇತರೆ ಬ್ಯಾಂಕುಗಳಲ್ಲಿನ ತಮ್ಮ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿಗೆ ವರ್ಗಾಯಿಸಿ ನಿಮ್ಮದೇ ಬ್ಯಾಂಕನ್ನು ಬೆಳೆಸಿ ಎಂದು ಮನವಿಮಾಡಿದರು.
15 ಕೋಟಿಯಿದ್ದ ಠೇವಣಿ ಹಣ ಇಂದು 300 ಕೋಟಿಯಷ್ಟಾಗಲು ಬಡವರು, ರೈತರು,ತಾಯಂದಿರೇ ಕಾರಣ, ಈ ಬ್ಯಾಂಕ್ ಬಡವರ ಬ್ಯಾಂಕ್, ನಿಮ್ಮ ಶ್ರೇಯೋಭಿವೃದ್ದಿಯೇ ನಮ್ಮ ಗುರಿಯಾಗಿದ್ದು, ನೀವು ಬದ್ದತೆಯಿಂದ ಸಾಲ ಮರುಪಾವತಿ ಮಾಡಿ ಎಂದು ಕೋರಿದರು.
ಬ್ಯಾಂಕಿನ ನಿರ್ದೇಶಕ ಕೆ.ವಿ.ದಯಾನಂದ್, ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಸೊಸೈಟಿಗಳು ಸಂಪೂರ್ಣ ಮುಚ್ಚಲ್ಪಟ್ಟು ರೈತರು, ಮಹಿಳೆಯರಿಗೆ ಯಾವುದೇ ಸರ್ಕಾರದ ಸಾಲ ಯೋಜನೆಗಳ ಪ್ರಯೋಜನ ಸಿಗುತ್ತಿರಲಿಲ್ಲ ಎಂದರು.
ಆದರೆ ನಮ್ಮ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದೆ, ರೈತರು,ಮಹಿಳೆಯರ ಆರ್ಥಿಕ ಸಬಲತೆಗೆ ಶಕ್ತಿ ತುಂಬುವ ಸಾಮರ್ಥ್ಯ ಪಡೆದುಕೊಂಡಿದೆ ಎಂದರು.
ಸೊಸೈಟಿಗಳು ಇಂದು ಆರ್ಥಿಕವಾಗಿ ಬಲಗೊಂಡಿವೆ, ರೈತರು, ತಾಯಂದಿರ ಬದುಕಿಗೆ ಆಸರೆಯಗಿದೆ, ಲಾಭದತ್ತ ಸಾಗಿರುವ ಸೊಸೈಟಿಗಳಲ್ಲಿ ಪಾರದರ್ಶಕತೆ ಕಾಪಾಡಲು ಗಣಕೀಕರಣಕ್ಕೆ ಒತ್ತು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ ನಿರ್ದೇಶಕರಾದ ಮುನೇಗೌಡ, ಮಾರ್ಜೇನಹಳ್ಳಿ ಸುಬ್ರಮಣಿ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಮೇಲ್ವಿಚಾರಕ ಅಮೀನಾ, ಸೊಸೈಟಿ ಮಾಜಿ ನಿರ್ದೇಶಕ ಚಂದ್ರಶೇಖರ್ ಮತ್ತಿತರರಿದ್ದರು.