ಬೆಂಗಳೂರು: ಪ್ರತೀ ವರ್ಷ ಸರಕಾರದ ವತಿಯಿಂದ ನಡೆಯುತ್ತಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳ ಜನ್ಮದಿನಾಚರಣೆ ಕಾರ್ಯಕ್ರಮ ಈ ಬಾರಿ ಶೋಕಾಚರಣೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ರಾಜ್ಯದ ಈಡಿಗರು, ಬಿಲ್ಲವರು, ನಾಮಧಾರಿ ಸಮಾಜದ ಮುಖಂಡರು ಇಂದು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬ್ರಹ್ಮರ್ಷಿ ನಾರಾಯಣಗುರುಗಳ ಪ್ರತಿಮೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಹಾಗೂ ಕನ್ನಡ ಸಂಸ್ಕೃತಿ ಸಚಿವ ಸಿಟಿ ರವಿ ಅವರನ್ನು ಭೇಟಿ ಮಾಡಿ, ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಸಮಾಜದ ಮುಖಂಡರ ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮುಂದಿನ ದಿನಗಳಲ್ಲಿ ಸಮಾಜದ ಬೇಡಿಕೆ ಈಡೇರಿಕೆಗೆ ಸಹಮತ ವ್ಯಕ್ತಪಡಿಸಿದರು.
ರಾಜ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಜೆ.ಪಿ. ಸುಧಾಕರ್, ವೇದಕುಮಾರ್, ಬಿ.ಎನ್. ಶಂಕರ ಪೂಜಾರಿ, ಲೋಕಸೇವಾ ಆಯೋಗದ ಸದಸ್ಯ ಡಾ. ಲಕ್ಷ್ಮೀನರಸಯ್ಯ ಮುಂತಾದ ಮುಖಂಡರು ಉಪಸ್ಥಿತರಿದ್ದರು.