ಮೈಸೂರು: ಸಚಿವ ಬಿ.ಶ್ರೀ ರಾಮುಲು ಅವರ ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಿತ್ತುಕೊಂಡು ಬೇರೆಯವರಿಗೆ ನೀಡುವ ಮಾಡುವ ಮೂಲಕ, ಶ್ರೀರಾಮುಲು ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆರೋಪಿಸಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶ್ರೀರಾಮುಲು ಅವರ ಖಾತೆ ಬದಲಾವಣೆ ಮಾಡಿದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶ್ರೀ ರಾಮುಲು ಕೂಡ ಪ್ರಮುಖರು. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು ಗೆಲ್ಲಲು ಶ್ರೀ ರಾಮುಲು ಅವರ ಶ್ರಮವೂ ಇದೆ. ಚುನಾವಣೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೊಡದೆ ಕೇವಲ ಸಚಿವ ಸ್ಥಾನ ನೀಡಿದರು. ಆ ಸಮಯದಲ್ಲೂ ನಮ್ಮ ಜನಾಂಗ ಸುಮ್ಮನಿತ್ತು. ಆದರೆ ಈಗ ಎರಡು ಸಚಿವ ಸ್ಥಾನದಲ್ಲಿ ಒಂದನ್ನು ಕಿತ್ತುಕೊಂಡು ರಾಮುಲು ಗೆ ಅವಮಾನ ಮಾಡಿದ್ದಾರೆ. ಇದು ನಾಯಕ ಜನಾಂಗಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಶ್ರೀರಾಮುಲು ಅವರನ್ನು ರಾಜಕೀಯವಾಗಿ ತುಳಿಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನಮ್ಮ ಸಮುದಾಯ ಸಹಿಸುವುದಿಲ್ಲ. ನಮ್ಮ ಸಮುದಾಯ ಸದಾ ಶ್ರೀ ರಾಮುಲು ಜೊತೆ ಇರುತ್ತದೆ. ಶ್ರೀ ರಾಮುಲುಗೆ ಸಚಿವ ಸ್ಥಾನದ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಜೊತೆಗೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.