ಚಿತ್ರದುರ್ಗ: ನಾನೊಬ್ಬ ಹಿರಿಯ ಹಾಗೂ ಅನುಭವಿ ಶಾಸಕ. ಪಕ್ಷದ ವರಿಷ್ಟರು ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದಲ್ಲಿ ಸಮರ್ಥವಾಗಿ ನಿಭಾಯಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಉತ್ತಮ ಹೆಸರು ತರುತ್ತೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗ ತಾಲೂಕಿನಲ್ಲಿ ಕೊಳೆರೋಗಕ್ಕೆ ತುತ್ತಾಗಿರುವ ಈರುಳ್ಳಿ ಬೆಳೆ ಪರಿಶೀಲಿಸಲು ರೈತರ ಜಮೀನುಗಳಿಗೆ ಶುಕ್ರವಾರ ಭೇಟಿ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ನನಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಮುಖ್ಯ. ಹಾಗಾಗಿ ನಾನು ರೈತರ ಬಳಿ ಹೋಗಿ ಅವರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದೇನೆ. ಅವರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಇಂತಹ ಸಂದರ್ಭದಲ್ಲಿ ಸಚಿವ ಸ್ಥಾನ ಸಿಕ್ಕರೆ ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಅಧಿಕಾರವಿದ್ದಲ್ಲಿ ಉತ್ತಮ ಕೆಲಸಗಳನ್ನು ಮಾಡಬಹುದು ಎಂದರು.
ರಾಜ್ಯದಲ್ಲಿ ಅಧಿಕಾರ ನಡೆಸಿದ ಹಲವು ಸರ್ಕಾರಗಳ ಸಂದರ್ಭದಲ್ಲಿ ಹೊರಗಿನವರೇ ಜಿಲ್ಲಾ ಉಸ್ತುವಾರಿಗಳಾಗಿದ್ದಾರೆ. ಜಿಲ್ಲೆಯವರಿಗೆ ಯಾರಿಗೂ ಅವಕಾಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಶಾಸಕನಾದ ನನಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಜಿಲ್ಲೆಯ ಜನರ ಆಶಯ. ಹಾಗೆಂದು ನಾನು ಸಚಿವ ಸ್ಥಾನ ಪಡೆಯಲು ಯಾವುದೇ ಲಾಭಿ ಮಾಡಿಲ್ಲ. ದೆಹಲಿಗಾಗಲಿ, ಬೆಂಗಳೂರಿಗಾಗಲಿ ಹೋಗಿ ಯಾರೀ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನದ ಪಟ್ಟಿಯಲ್ಲಿ ನನ್ನ ಹೆಸರು ಇರುವ ಕುರಿತು ಪತ್ರಿಕೆಯಲ್ಲಿ ಓದಿದ್ದೇನೆ. ಟಿ.ವಿ.ಯಲ್ಲಿ ನೋಡಿದ್ದೇನೆ. ಸಚಿವ ಸ್ಥಾನ ನೀಡುವಲ್ಲಿ ಮುಖ್ಯಮಂತ್ರಿ ಅವರದ್ದೇ ಪರಮಾಧಿಕಾರ. ಅಲ್ಲದೇ ಪಕ್ಷದ ತೀರ್ಮಾನ ಅಂತಿಮ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ನಿಷ್ಟೆಯಿಂದ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ನೀಡಿದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ವೈ. ಹಾಗೂ ಬಿಜೆಪಿ ಪಕ್ಷಕ್ಕೆ ಉತ್ತಮ ಹೆಸರು ತರುವ ಕೆಲಸ ಮಾಡುತ್ತೇನೆ ಎಂದರು.