ದಿಗಂತ ವರದಿ ಬಂಟ್ವಾಳ:
ಸಜೀಪ ಮುನ್ನೂರು ಗ್ರಾ.ಪಂ.ನ ಆಲಾಡಿಯಲ್ಲಿ ಜಾಕ್ವೆಲ್ ನಿರ್ಮಿಸಿ ನೇತ್ರಾವತಿ ನದಿಯಿಂದ ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾಡಳಿತ ಸೇರಿದಂತೆ ಇತರ ಪ್ರದೇಶಗಳಿಗೆ ನೀರೆತ್ತಲಾಗುತ್ತಿದ್ದು, ಸಜೀಪಮೂಡ ಗ್ರಾ.ಪಂ. ಭಾಗದಲ್ಲೂ ನೀರಿನ ಪೈಪ್ಲೈನ್ ಹಾದು ಹೋಗುತ್ತಿ ದೆಯಾದರೂ, ಈ ಗ್ರಾಮಕ್ಕೆ ನೀರು ನೀಡುವ ಬಗ್ಗೆ ಸ್ವಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ಶನಿವಾರ ಸುಭಾಷ್ನಗರದಲ್ಲಿ ಗ್ರಾ.ಪಂ. ನಿಯೋಗ ಪ್ರತಿಭಟನೆ ನಡೆಸಿದರು.
ಈ ಹಿಂದೆ ನಾಲ್ಕು ಬಾರಿ ಮನವಿ ಮಾಡಿದರೂ, ಯಾರೂ ಕೂಡ ಸ್ಪಂದನೆ ನೀಡಿಲ್ಲ. ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿಯೋರ್ವ, ಗ್ರಾ.ಪಂ. ಉಪಾಧ್ಯಕ್ಷರ ಜತೆ ಉಡಾಫೆ ಮಾತುಗಳನ್ನಾಡಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಕಾಮಗಾರಿ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭ ಸ್ಥಳಕ್ಕೆ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಗಮಿಸಿ ಮಂಡಳಿಯ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ೨ ದಿನಗಳೊಳಗೆ ಗ್ರಾ.ಪಂ.ಗೆ ಆಗಮಿಸಿ ಗ್ರಾಮಕ್ಕೆ ನೀರು ಕೊಡುವ ಕುರಿತು ಭರವಸೆ ನೀಡುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ಜಿ.ಪಂ.ಸದಸ್ಯರಿಗೆ ಹಾಗೂ ಪಿಡಿಒ ಅಧಿಕಾರಿ ನಿರ್ಮಲಾಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಸದಸ್ಯರಾದ ವಿಶ್ವನಾಥ ಬೆಳ್ಚಡ, ಅಶೋಕ ಪೂಜಾರಿ, ಸೀತಾರಾಮ ಅಗೋಳಿಬೆಟ್ಟು, ಯೋಗೀಶ್ ಬೆಳ್ಚಡ, ಹಮೀದ್ ಕೊಳಕೆ, ಫೌಝಿಯಾ, ಶೋಭಾ ಶೆಟ್ಟಿ, ಯಮುನಾ, ಸುಂದರಿ, ಪ್ರಶಾಂತ್ ಪೂಜಾರಿ, ಅರುಂಧತಿ, ಹೇಮಾವತಿ, ವಿಜಯ, ಅಬ್ದುಲ್ ಅಝೀಜ್, ಪ್ರಮೀಳಾ ಡಿಸೋಜಾ, ಪ್ರಮುಖರಾದ ಸೀತಾರಾಮ ಶೆಟ್ಟಿ, ಹರೀಶ್ ಗಟ್ಟಿ, ಗಿರೀಶ್ ಪೆರ್ವ, ಯೂಸೂಫ್ ಕರಂದಾಡಿ ಇದ್ದರು.