ಹೊಸ ದಿಗಂತ ವರದಿ, ಶಿವಮೊಗ್ಗ:
ತೀಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಲಪುರ ಗ್ರಾಮದ ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ಅವರು ತಮ್ಮ ತೋಟದಲ್ಲಿ ಸಣ್ಣ ಅಡಿಕೆ ಸಸಿ ರಕ್ಷಣೆಗೆ ರಸ್ತೆ ಬದಿ ಬಿದ್ದ ಬಾಟಲಿಗಳನ್ನು ಬಳಸಿ ಯಶಸ್ಸು ಕಂಡಿದ್ದಾರೆ.
ಇವರು ಹಳೆಯ ಅಡಿಕೆ ಸಸಿಗಳ ಮಧ್ಯೆ ಸಣ್ಣ ಸಣ್ಣ ಸಸಿಗಳನ್ನು ನೆಟ್ಟಿದ್ದರು. ಈ ಎಳೆಯ ಸಸಿಗಳನ್ನು ಕಾಡು ಮೊಲಗಳು ನಿತ್ಯ ತಿನ್ನುತ್ತಿದ್ದವು. ಮೊಲಗಳಿಂದ ರಕ್ಷಣೆ ಪಡೆಯಲು ಬಲೆ ಹಾಕಿದರು. ಯಾವುದೇ ಪ್ರಯೋಜನವಾಗದೆ ಸಸಿಗಳನ್ನು ಮೊಲಗಳು ತಿಂದು ಹಾಳು ಮಾಡುತ್ತಿದ್ದವು.
ಮಾಡಬೇಕು ಎಂದು ತೋಚದಂತಾಯಿತು. ಈ ಸಮಸ್ಯೆಗೆ ಇವರೇ ಒಂದು ಉಪಾಯವನ್ನು ಕಂಡುಕೊಂಡರು. ಮೊಲಗಳು ಅಡಿಕೆ ಸಸಿಯ ಗರಿಗಳನ್ನುತಿನ್ನುತ್ತಿದ್ದವು. ಮೊಲಗಳಿಗೆ ಗರಿಯೇ ಸಿಗದಂತೆ ಮಾಡಿದರೆ ಹೇಗೆ ಎಂಬ ಯೋಚನೆ ಹೊಳೆಯಿತು. ಕಸದಿಂದ ರಸ ಎಂಬಂತೆ ರಸ್ತೆಯಲ್ಲಿ ಬಿದ್ದ ಪ್ಲಾಸ್ಟಿಕ್ ಡಬ್ಬಿಗಳನ್ನು ತಂದು ಅದನ್ನು ಕಟ್ ಮಾಡಿ ನಂತರ ಅಡಿಕೆ ಗಿಡಕ್ಕೆ ಹಾಕಿ ಗರಿಗಳು ಮೇಲ್ಮುಖವಾಗಿ ಇರುವಂತೆ ಮಾಡಿದರು. ಇವರ ಉಪಾಯ ಫಲಿಸಿತು. ಇವರ ತೋಟದಲ್ಲಿ ಯಾವುದೇ ಅಡಿಕೆ ಸಸಿಗಳನ್ನು ಮೊಲಗಳು ಈಗ ತಿನ್ನುತ್ತಿಲ್ಲ .
ಮೊಲಗಳ ರಕ್ಷಣೆಗೆ ಇವರು ಕಂಡುಕೊಂಡ ಉಪಾಯಕ್ಕೆ ಜನರೆಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.