Wednesday, August 10, 2022

Latest Posts

ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಅನುಶ್ರೀ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮಂಗಳೂರಿನ ಪಣಂಬೂರು ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿನಯ ಗಾಂವ್ಕರ್ ನೇತೃತ್ವದ ತಂಡ ವಿಚಾರಣೆ ನಡೆಸಿತು. ವಿಚಾರಣೆ ಮುಗಿಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ, ಸಿಸಿಬಿ ಪೊಲೀಸರು ತನಗೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಅದನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಪೊಲೀಸರು ಯಾವಾಗ ವಿಚಾರಣೆಗೆ ಕರೆದರು ತಾನು ಹಾಜರಾಗಲು ಸಿದ್ಧಳಿದ್ದೇನೆ ಎಂದರು.
೧೨ ವರ್ಷಗಳ ಹಿಂದೆ ತರುಣ್‌ರಾಜ್ ನನಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದರಿಂದ ಆತನ ಪರಿಚಯವಿತ್ತು ಅಷ್ಟೆ. ಆದರೆ ಡ್ರಗ್ಸ್ ಚಟುವಟಿಕೆ ಬಗ್ಗೆ ಯಾವುದೇ ಸಂಬಂಧವಿಲ್ಲ. ತರುಣ್ ರಾಜ್‌ನ ಡ್ಯಾನ್ಸ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮಕ್ಕೂ ನಾನು ಬಂದಿದ್ದೆ. ಈ ಎಲ್ಲಾ ಮಾಹಿತಿಯನ್ನು ಪೊಲೀಸರಲ್ಲಿ ಹಂಚಿಕೊಂಡಿದ್ದೇನೆ ಎಂದು ಅನುಶ್ರೀ ವಿವರಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅನುಶ್ರೀ ಪಾರ್ಟಿಯಲ್ಲಿ ಭಾಗಿಯಾಗಿದ್ದೆ ಎಂಬ ಕಾರಣಕ್ಕೆ ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿಲ್ಲ.ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ರಾಜ್ ೧೨ ವರ್ಷಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್‍ಸ್ ಆಗಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದರು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss