ಬೆಂಗಳೂರು: ಪ್ರವಾಹ ಹಾಗೂ ಕೊರೋನಾ ಸಂಕಷ್ಟದಿಂದ ಜನ ಬೇಸತ್ತಿದ್ದು, ಪರಿಹಾರ ಬಯಸುತ್ತಿದ್ದಾರೆ. ಇದರ ವೈಫಲ್ಯಗಳನ್ನು ಮುಚ್ಚಿಹಾಕಲು ಸರ್ಕಾರ ಡ್ರಗ್ಸ್ ಪ್ರಕರಣದ ತನಿಖೆ ದುರ್ಬಳಕೆ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಲ ನಾಯಕರು ತನಿಖೆ ಬಗ್ಗೆ ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದನ್ನು ಬಿಟ್ಟು ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಎಂದಿದ್ದಾರೆ. ಮಾದಕ ವಸ್ತುಗಳ ಬಳಕೆ ಬಗ್ಗೆ ನಾವೂ ವಿರೋಧ ವ್ಯಕ್ತಪಡಿಸುತ್ತೇವೆ ಆದರೆ ನಿಮ್ಮ ಉದ್ದೇಶ ಸರಿಯಾಗಿಲ್ಲ ಎಂದಿದ್ದಾರೆ.
ಡ್ರಗ್ಸ್ ಹಗರಣದಲ್ಲಿ ತಮ್ಮ ಪಕ್ಷದ ಕೆಲವರು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಇದೇ ಪ್ರಕರಣ ಬಳಸಿ ಸುಮ್ಮನೆ ಬಾಯಿಗೆ ಬಂದದ್ದು ಮಾತನಾಡುವುದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ. ಪ್ರತಿ ಬಾರಿ, ಪ್ರತಿ ಪ್ರಕರಣದ ಸಂದರ್ಭದಲ್ಲೂ ಎಲ್ಲವನ್ನೂ ಮುಚ್ಚಿಹಾಕುವ ಯತ್ನ ಮಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕರ ಮೇಲೆ ಸುಳ್ಳು ಆರೋಪ ಹೊರಿಸುವ ಕುತಂತ್ರ ಮಾಡಿದ್ದು, ಈಗಲೂ ಅದನ್ನೇ ಮುಂದುವರಿಸಿದ್ದೀರಿ. ಸತ್ಯ ಮುಚ್ಚಿಡಬಹುದು ಆದರೆ ನಾಶ ಮಾಡಲು ಆಗುವುದಿಲ್ಲ ಎಂದಿದ್ದಾರೆ.