ಹೊಸ ದಿಗಂತ ವರದಿ, ಶಿವಮೊಗ್ಗ
ಸದೃಢ ಭಾರತ ನಿರ್ಮಾಣವಾಗುವಲ್ಲಿ ಸಂವಿಧಾನದ ಪಾತ್ರ ಪ್ರಮುಖವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಸಾಗರದ ಸಾಗರ ಹೋಟೆಲ್ ವೃತ್ತದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗ, ಎಸ್.ಸಿ. ಘಟಕ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಅಂಗೀಕಾರ ದಿನಾಚರಣೆಯನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ರಚನೆ ಮಾಡಲು ಡಾ. ಬಿ.ಆರ್. ಅಂಬೇಡ್ಕರ್ ಹಗಲುರಾತ್ರಿ ಶ್ರಮಿಸಿದ್ದಾರೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಸಾಮರಸ್ಯದಿಂದ ಬದುಕಲು ಸಾಧ್ಯವಾಗಿದೆ. ಸಾಮಾಜಿಕ ನ್ಯಾಯ, ಸಮಾಜವಾದಿ, ಜಾತ್ಯಾತೀತ ನಡೆನುಡಿ ಭಾರತದ ಧೀಶಕ್ತಿಯಾಗಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಮುಖರಾದ ಯಶವಂತ ಪಣಿ, ಅಶೋಕ ಬೇಳೂರು, ನಾಗರಾಜಸ್ವಾಮಿ, ಮೋಹನ್, ಜಗದೀಶ್ ಕುರ್ಡೇಕರ್, ಸಂತೋಷ್, ರಮೇಶ್ ಚಂದ್ರಗುತ್ತಿ ಹಾಜರಿದ್ದರು.