ಬೆಂಗಳೂರು: ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ SSLC ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ತೆಲಂಗಾಣ ಹಾಗೂ ತಮಿಳುನಾಡು ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದುಗೊಳಿಸಿದ್ದು, ಇದೀಗ ಎಲ್ಲರ ಚಿತ್ತ ಕರ್ನಾಟಕದ ಎಸ್ ಎಸ್ ಎಲ್ ಸಿ ಪರಿಕ್ಷೆಯ ಕುರಿತಾಗಿದೆ.
ಕಳೆದ 15 ದಿನಗಳಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ 31 ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ 5 ಸಾವಿರ ಕಿ.ಮೀ ಸಂಚಾರ ಮಾಡಿ, ಸಭೆ ನಡೆಸಿದ ಬಳಿಕ ನಿರ್ದೇಶನ ನೀಡಿದ್ದಾರೆ.
ಇಂದು ಅಭಿಯಾನದ ಕಡೆಯ ಭಾಗವಾಗಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾ. ಜಿಲ್ಲಾಡಳಿತಗಳ ಜೊತೆ ಚರ್ಚೆ ನಡೆಸಿದರು. ಸಮಾಜಕ್ಕೆ ಭರವಸೆ ಮೂಡಿಸುವ ರೀತಿಯಲ್ಲಿ ಪರೀಕ್ಷೆ ನಡೆಸಲಿದ್ದು, ಉಚ್ಚ ನ್ಯಾಯಾಲಯದ ನಿರ್ದೇಶಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ.
ವಿದ್ಯಾರ್ಥಿ ಪೋಷಕರ ನಿರೀಕ್ಷೆಗೆ ಅನುಗುಣವಾಗಿ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ಜೂನ್ 12ರಿಂದ 17ರವರೆಗೆ ವಿಶೇಷ ಪುನರ್ಮನನ: ಜೂನ್ 12 ರಿಂದ 17ರವರೆಗು ದೂರದರ್ಶನ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ವಿಶೇಷ ಪುನರ್ಮನನ ತರಗತಿಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.