Saturday, June 25, 2022

Latest Posts

ಸಮಾಜದ ಉತ್ತಮ ಕೆಲಸಗಳಿಗೆ ವೈದ್ಯ ವೃತ್ತಿ ಬಳಸಿಕೊಳ್ಳಲು ಚುಂಚಶ್ರೀ ಕರೆ

ಹೊಸ ದಿಗಂತ ವರದಿ, ಮಂಡ್ಯ:

ವೈದ್ಯ ವೃತ್ತಿಯನ್ನು ಕೇವಲ ಹಣ ಮಾಡುವುದಕ್ಕೆ ಬಳಸಿಕೊಳ್ಳದೆ ಸಮಾಜದ ಉತ್ತಮ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೂತನ ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಮಿಮ್ಸ್‌ನಲ್ಲಿ ಶುಕ್ರವಾರ ರಾತ್ರಿ ನಡೆದ 2021ನೇ ಸಾಲಿನ ಘಟಿಕೋತ್ಸವದಲ್ಲಿ ನೂತನ ವೈದ್ಯರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಕೃತಿಯಿಂದ ರಚಿತವಾದ ದೇಹವನ್ನು ನಾವು ಇಟ್ಟುಕೊಂಡಿದ್ದು, ಅದನ್ನು ಉತ್ತಮ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ
ಕಷ್ಟ ಬಂದಾಗ ವೈದ್ಯರ ಬೆಲೆ ಗೊತ್ತಾಗುತ್ತದೆ. ಅಂತಹ ಪವಿತ್ರ ಪದವಿಯನ್ನು ಪಡೆದು ಸಮಾಜದ ಅಭ್ಯುದಯಕ್ಕೆ ಹೊರಟಿದ್ದೀರಾ ನಿಮಗೆ ಶುಭವಾಗಲಿ. ಸೇವಾ ಮಾರ್ಗವನ್ನು ಅನುಸರಿಸಿ ಉತ್ತಮ ಹೆಸರು ಮಾಡಿ. ದೇವರು ಕೊಟ್ಟ ದೇಹವು ಹದಗೆಟ್ಟಾಗ ಅದನ್ನು ಸರಿದಾರಿಗೆ ತರಲು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದರು.

ಮಾನವೀಯ ವೌಲ್ಯಗಳ ಬೆಳೆಸಿಕೊಳ್ಳಬೇಕು
ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ಮಾನವೀಯ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವೈದ್ಯ ವೃತ್ತಿ ಪವಿತ್ರವಾದುದು. ದಯೆಯೇ ಧರ್ಮದ ಮೂಲವಯ್ಯ ಎಂಬಂತೆ ದಯೆಯನ್ನು ಬೆಳೆಸಿಕೊಳ್ಳಬೇಕು. ಬಡವರ ಸೇವಯನ್ನು ಮಾಡುವುದರಲ್ಲಿ ತಮ್ಮ ವೃತ್ತಿಯನ್ನು ನೋಡಿ. ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಾಮಾಣಿಕವಾಗಿ ವೃತ್ತಿ ನಿರ್ವಹಿಸಿ
ಪ್ರಮಾಣ ವಚನ ಬೋಧಿಸಿದ ಡಾ.ಕೆ.ಎಂ.ಶಿವಕುಮಾರ್ ಮಾತನಾಡಿ, ವೈದ್ಯರಿಗೆ ತಾಳ್ಮೆ ಬಹುಮುಖ್ಯ. ಯಾವುದೇ ಆಮಿಷಕ್ಕೆ ಒಳಗಾಗದೆ ವೈದ್ಯ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಆ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಮಾಡಬೇಕು ಎಂದು ಸಲಹೆ ನೀಡಿದರು.
ವೈದ್ಯರಾಗಿ ಪದವಿ ಸ್ವೀಕರಿಸುತ್ತಿರುವ ನೀವು ವೃತ್ತಿ ಗೌರವವನ್ನು ಕಾಪಾಡಿ. ಮಾನವೀಯ ಮತ್ತು ವೃತ್ತಿ ವೌಲ್ಯಗಳನ್ನು ಬೆಳೆಸಿಕೊಳ್ಳಿ, ನೈತಿಕತೆ ನಿಮ್ಮದಾಗಲಿ. ಔಷಧ ವಿಭಾಗದಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಾಧ್ಯತೆಗಳು ಇವೆ. ವೃತ್ತಿ ಜೀವನದಲ್ಲಿ ನೈತಿಕತೆ ಬಹಳ ಮುಖ್ಯ. ನೀವು ಓದಿದ ವಿದ್ಯಾಸಂಸ್ಥೆಗೆ ಗೌರವ ತನ್ನಿ. ಒಳ್ಳೆಯ ವೈದ್ಯರಾಗಿ ಕೆಲಸ ಮಾಡಿ ನಾಗರಿಕರಾಗಿ ಸಮಾಜಕ್ಕೆ ನಿಮ್ಮ ಸೇವೆ ಸಿಗಲಿ. ಮನುಕುಲಕ್ಕೆ ನಿಮ್ಮಿಂದ ಒಳ್ಳೆದಾಗಲಿ ಎಂದು ಆಶಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss