ದಿಗಂತ ವರದಿ, ಗಂಗೊಳ್ಳಿ:
ಇವರ್ಯಾರು ಸಿರಿವಂತರಲ್ಲ. ದೈನಂದಿನ ದುಡಿಮೆಯಿಂದಲೇ ಜೀವನ ರೂಪಿಸಿಕೊಂಡವರು. ಮೀನುಗಾರಿಕೆಯೇ ಉಸಿರು. ಹೀಗಿರುತ್ತಾ ಹಿಂದೆಂದೂ ಕೇಳರಿಯದ ಕೊರೋನಾ ಲಾಕ್ಡೌನ್ ಜಾರಿಯಾಯಿತು. ದಿನದ ದುಡಿಮೆಗೆ ಹೋಗದಿದ್ದರೇ ಅನ್ನ ಬೇಯದ ಮನೆಗಳಲ್ಲಿ
ಸಂಕಷ್ಟ ಎದ್ದು ನಿಂತಿತು. ಅದಾಗ್ಯೂ ತನ್ನಂತೆ ಇರುವವರ ನೆರವಿಗೆಂದು ಲಾಕ್ಡೌನ್ನಲ್ಲಿ ಅವರು ತಂಡ ಕಟ್ಟಿದರು. ಹಸಿವಿನಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಅನ್ನ ಆಹಾರ ಒದಗಿಸಿದರು. ಪಯಣದ ಈ ಹಾದಿಯಲ್ಲಿ ಎದುರಾಗಿದ್ದೇ ಸಂಕಷ್ಟಮಯ ನೋಟ.
ಏನಿದು ನೋಟ: ಸಮುದ್ರ ತಟದಲ್ಲಿ ಟಾರ್ಪಲ್ ರೂಪಿತ ಕುಟೀರವದು. ಮನೆಯ ಯಜಮಾನನಿಗೆ ಕೆಲಸವಿಲ್ಲ. ಯಜಮಾನ್ತಿ ಅನಾರೋಗ್ಯದಿಂದ ಹಾಸಿಗೆ ಹಿಡಿದವರು. ಮಕ್ಕಳಿಬ್ಬರು ಶಾಲೆಗೆ ಹೋಗುತ್ತಿದ್ದಾರೆ. ಸೋರುವ ಟಾರ್ಪಲ್ ಮನೆಯೊಳಗೆ ದಯನೀಯ ನೋಟ. ಆಹಾರ ಕಿಟ್ ನೀಡಲೆಂದು ಹೋದವರ ಹೃದಯಭಾರವಾಗಿಸಿದ ಸಂದರ್ಭ. ಅಲ್ಲೇ ಹುಟ್ಟಿತು ಸಂಕಲ್ಪ.
ಏನಿದು ಸಂಕಲ್ಪ: ಸ್ವಂತದ್ದಾದ ಮನೆಯಿಲ್ಲದೆ ಹಕ್ಕುಪತ್ರವೂ ಇಲ್ಲದೆ ಹಂದಿಗೂಡಿನಂತಿರುವ ಟಾರ್ಪಲ್ ಗುಡಿಸಲಿನಲ್ಲಿ ನೆಲೆಗೊಂಡ ಕುಟುಂಬಕ್ಕೆ ಏನೆ ಆಗಲಿ ಪುಟ್ಟ ಮನೆ ನಿರ್ಮಿಸಬೇಕೆಂದು ಇವರು ಸಂಕಲ್ಪಿಸಿದರು. ತಮ್ಮ ತಂಡಕ್ಕೆ ಸೇವಾಸಂಕಲ್ಪ ಎಂದು ಹೆಸರಿಸಿದರು. ಹನಿ ಗೂಡಿದರೆ ಹಳ್ಳ ಎಂಬಂತೆ ಮಳೆಗಾಲ ಕೊನೆಗೊಂಡ ಬೆನ್ನಲ್ಲೇ ಇಟ್ಟಿಗೆ ಇಟ್ಟಿಗೆ ಜೋಡಿಸಿ ಮನೆ ನಿರ್ಮಾಣಕ್ಕೆ ಮುಂದಾದರು. ಇದು ಶೇ. 75ರಷ್ಟು ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ ಕಾರ್ಯಕ್ಕಾಗಿ ಹೋರಾಟ ಮುಂದುವರಿಕೆಯಾಗಿದೆ. ಇದು ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಬಂದರು ಬೇಲಿಕೇರಿ ಎಂಬಲ್ಲಿ ನಡೆಯುತ್ತಿರುವ ಹೃದಯಂಗಮ ಹೋರಾಟವೊಂದರ ದೃಶ್ಯವಿದು.
ತಲೆಯೆತ್ತುತ್ತಿದೆ ಮನೆ: ಗಂಗೊಳ್ಳಿ ಬೇಲಿಕೇರಿ ನಿವಾಸಿ ಕೃಷ್ಣಿ ಎಂಬವರ ಕುಟುಂಬಕ್ಕೆ ಮೀನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ಜನರು ಒಂದುಗೂಡಿ ರೂಪಿಸುತ್ತಿರುವ ಮನೆ ನಿರ್ಮಾಣದ ಕಥನವಿದು. 300 ಚದರ ಅಡಿ ಮನೆ ನಿರ್ಮಾಣಕ್ಕೆ ಹೊರಟ ತಂಡ ಈಗ 1,000 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಿದೆ. ಪಂಚಾಂಗ, ಗೋಡೆ, ಮೇಲ್ಮಾಡು ರಚನೆಯಾಗಿದೆ. ಮನೆಗೆ ಗಾರೆ, ನೆಲಕ್ಕೆ ನೆಲಹಾಸು ಜೋಡಣೆ ಬಾಕಿ ಉಳಿದುಕೊಂಡಿದೆ. ಅಂದಾಜು 3 ಲಕ್ಷ ರೂ. ಬಜೆಟ್ ಇರಿಸಿಕೊಂಡು ಹೊರಟ ತಂಡಕ್ಕೆ ಈ ವರೆಗೆ 5 ಲಕ್ಷ ರೂ. ವ್ಯಯವಾಗಿದೆ. ತಮ್ಮ ದುಡಿಮೆಯ ಹಣದಿಂದ ಅಷ್ಟಿಷ್ಟು ಕೂಡಿಸಿಕೊಂಡು ಉದ್ದೇಶದ ಸಫಲತೆಗೆ ಹೋರಾಟ ನಡೆಸುತ್ತಿದ್ದಾರೆ. ಸೇವಾಸಂಕಲ್ಪ ತಂಡದ ಈ ಕೈಂಕರ್ಯಕ್ಕೆ ಸ್ಥಳೀಯ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಶೆಣೈ ಸಹಿತ ಅಸಂಖ್ಯ ಮಂದಿ ಸಹಕರಿಸಿದ್ದಾರೆ. ಲಂಕೆಗೆ ರಾಮಸೇತು ನಿರ್ಮಿಸಿದಂತೆ ಪ್ರತಿಯೊಬ್ಬರ ಬೆವರ ಹನಿ ಇಲ್ಲಿ ಬೀಳುತ್ತಿದೆ.
ಸಹೃದಯರ ಸಹಕಾರದ ಅಪೇಕ್ಷೆ: ಮೀನುಗಾರಿಕೆ ದುಡಿಮೆಯಿಂದ ಬದುಕುತ್ತಿರುವ ಒಂದಷ್ಟು ಮಂದಿ ಒಂದುಗೂಡಿ ನಿರ್ಮಿಸುತ್ತಿರುವ ಮನೆ ಶೇ.75ರಷ್ಟು ಪೂರ್ಣಗೊಂಡಿದೆ. ಇನ್ನೂ ಸಾಕಷ್ಟು ಕೆಲಸ ಕಾರ್ಯಗಳು ನಡೆಯಬೇಕಾಗಿರುವುದರಿಂದ ಸಹೃದಯರ ಸಹಕಾರದ ಅಪೇಕ್ಷೆ ಇರಿಸಿದ್ದಾರೆ. ಅಷ್ಟೇ ಅಲ್ಲ ಪಿಯುಸಿ ಓದುತ್ತಿರುವ ಕೃಷ್ಣಿಯವರ ಪುತ್ರ ಸಚಿನ್ ಅವರ ಮುಂದಿನ ವಿದ್ಯಾಭ್ಯಾಸಕ್ಕೂ ಸಹಕರಿಸುವ ಯೋಜನೆ ಇರಿಸಿಕೊಂಡಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಕೃಷ್ಣಿ, ಅನಾರೋಗ್ಯಪೀಡಿತ ಅವರ ಪತಿಗೂ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದ್ದಾರೆ. ಸಹಕಾರ ನೀಡಬಯಸುವ ಸಹೃದಯರು ಕೃಷ್ಣಿಯವರ ಪುತ್ರ ಸಚಿನ್ ಖಾರ್ವಿ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಉಳಿತಾಯ ಖಾತೆ ನಂಬರ್ 0604109019266 (ಸಿಎನ್ಆರ್ಬಿ-00006040) ಸಲ್ಲಿಸಬಹುದು.