ರಾಮನಗರ: ಸರ್ಕಾರದ ಕೆಲಸ ದೇವರ ಕೆಲಸವೆಂದು ನಂಬಿ ಸತ್ಯ, ನಿಷ್ಠೆ, ಪ್ರಾಮಾಣಿಕತೆಗೆ ಗೌರವಾದರದಿಂದ ಜನ ಸೇವಕರಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪ್ರಶಸ್ತಿ, ಪದಕಗಳು ಲಭಿಸುತ್ತವೆ ಎಂದು ಸಾರ್ವಜನಿಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಪುಟ್ಟಲಿಂಗಯ್ಯ ಅಭಿಪ್ರಾಯಪಟ್ಟರು. ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟçಪತಿ ಪದಕ ಪುರಸ್ಕೃತ, ಆರಕ್ಷಕ ವೃತ್ತ ನಿರೀಕ್ಷಕ ಮಡಿಕೇರಿ ಸಿ.ಎನ್.ದಿವಾಕರ್ರವರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪೊಲೀಸರ ಗಣನೀಯ ಸೇವೆಯ ಕಾರ್ಯದಕ್ಷತೆಯನ್ನು ಮನಗಂಡು, ಅವರ ಕ್ಷೇತ್ರ ಕಾರ್ಯಾಚರಣೆಯನ್ನು ಪರಿಶೀಲಿಸಿ ಕೊಟ್ಟಿರುವುದು ಸಿ.ಎನ್.ದಿವಾಕರ್ರವರಿಗೆ ಸಂದ ಗೌರವ ಎಂದು ಸ್ಮರಿಸಿದರು. ತೋಟಗಾರಿಕೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರಯ್ಯ ಮಾತನಾಡಿ, ಪೊಲೀಸ್ ಇಲಾಖೆ ಕಷ್ಟಕರವಾದ ಜನಸಾಮಾನ್ಯರ ಸಂಕಷ್ಟವನ್ನು ನಿವಾರಿಸುವ ಹಾಗೂ ಕೆಲ ಸಂದರ್ಭದಲ್ಲಿ ಜೀವದ ಹಂಗು ತೊರೆದು ನಿಭಾಯಿಸುವ ಹಗಲು ರಾತ್ರಿ ಎನ್ನದೆ ಯಾವ ಸಂದರ್ಭದಲ್ಲಾದರೂ ಸ್ಟಡಿಯಾಗಿರಬೇಕಾದ ಹುದ್ದೆಯಾಗಿದೆ. ಇವರ ಕಾರ್ಯದಕ್ಷತೆಗೆ ರಾಷ್ಟçಪತಿ ಪದಕ ಲಭಿಸಿರುವುದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದಂತಾಗಿದೆ ಎಂದು ತಿಳಿಸಿದರು. ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಎಂ.ಶಿವಮಾದು ಮಾತನಾಡಿ ಜೀವದ ಹಂಗು ತೊರೆದು ಅಹರ್ನಿಶಿ ಕೆಲಸ ನಿರ್ವಹಿಸಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ತನ್ನ ಪ್ರಾಮಾಣಿಕತೆ, ಶಿಸ್ತು, ಬದ್ಧತೆಯನ್ನು ಪ್ರದರ್ಶಿಸುವುದರಲ್ಲಿ ಪೊಲೀಸ್ ಕರ್ತವ್ಯ ಮುಖ್ಯವಾದುದು ಎಂದು ಹೇಳಿದರು. ನಗರಸಭೆ ಮಾಜಿ ಸದಸ್ಯ ಎಸ್.ಉಮಾಶಂಕರ್ ಮಾತನಾಡಿ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಿಂತ ಸಾಮಾನ್ಯ ಜನರ ರಕ್ಷಣೆಗೆ ಹೆಸರಾದ ಪೊಲೀಸ್ ಹುದ್ದೆ ಪುಣ್ಯದ ಕೆಲಸ. ಇಂತಹ ಕೆಲಸದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಷ್ಟçಪತಿ ಪದಕಕ್ಕೆ ಭಾಜನರಾಗಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಿದ್ದಪ್ಪ ನಾಗವಾರ, ಶಿಕ್ಷಕರುಗಳಾದ ಸಿ.ಎಸ್.ಸಿದ್ದಲಿಂಗಯ್ಯ, ರಾಮಕೃಷ್ಣ, ಕೆಎಸ್ಆರ್ಟಿಸಿ ಇಲಾಖೆಯ ಲೆಕ್ಕಾಧಿಕಾರಿ ಪ್ರಕಾಶ್ರೆಡ್ಡಿ, ಶಿಕ್ಷಣ ಇಲಾಖೆಯ ಕಾಂತರಾಜು, ಅರಗು ಮತ್ತು ಕರಕುಶಲ ಕೈಗಾರಿಕಾ ಆಡಳಿತಾಧಿಕಾರಿ ಪಿ.ರಾಜು, ಮುಖಂಡರಾದ ಪುಟ್ಟರಾಮು, ಸುರೇಶ್ ಉಪಸ್ಥಿತರಿದ್ದರು