ಉಡುಪಿ: ಕೋವಿಡ್ -19 ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಜೂನ್ 1ರಿಂದ ತೆರೆಯಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟರೂ ಉಡುಪಿಯ ಶ್ರೀಕೃಷ್ಣಮಠಕ್ಕೆ ಮುಂದಿನ 15 ದಿನಗಳ ಕಾಲ ಭಕ್ತರಿಗೆ ಪ್ರವೇಶ ಮುಕ್ತವಾಗುವುದಿಲ್ಲ.
ಪ್ರಸಕ್ತ ಕೃಷ್ಣಮಠದ ಮಠದ ಬಾಗಿಲು ಮುಚ್ಚಲಾಗಿದ್ದರೂ ದೇವರಿಗೆ ದೈನಂದಿನ ಪೂಜೆಗಳು ಯಾವುದೇ ತೊಂದರೆ ಇಲ್ಲದೇ ಯಥಾವತ್ತಾಗಿ ನಡೆಯುತ್ತಿವೆ. ಇದೀಗ ಏಕಾಏಕಿ ಸಾರ್ವಜನಿಕರಿಗೆ ಮಠ ಪ್ರವೇಶಕ್ಕೆ ಅವಕಾಶ ನೀಡಿದರೆ ಕೊರೋನಾ ಸೋಂಕು ಹರಡುವ ಭೀತಿ ಇದೆ. ಈ ನಿಟ್ಟಿನಲ್ಲಿ ಇನ್ನೂ 15ದಿನಗಳ ಕಾಲ ಮಠಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ ರಥಬೀದಿಯ ಕನಕನ ಕಿಂಡಿ ಮೂಲಕ ಕೃಷ್ಣದರ್ಶನಕ್ಕೆ ಅವಕಾಶ ಇದೆ ಎಂದು ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಪ್ರಕಟಣೆ ತಿಳಿಸಿದೆ.