Thursday, August 11, 2022

Latest Posts

ಸರಣಿ ಸುಳ್ಳುಗಳ ಮೂಲಕ ಕಾಂಗ್ರೆಸಿಗರು ಜನತೆಯ ಹಾದಿ ತಪ್ಪಿಸುತ್ತಿದ್ದಾರೆ: ದ. ಕ. ಜಿಲ್ಲಾ ಬಿಜೆಪಿ

ಮಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಲಾಭ ಪಡೆಯುವ ಕೀಳು ರಾಜಕೀಯ ಮಾಡುತ್ತಿರುವ ಕಾಂಗ್ರೆಸಿಗರು ಸರಣಿ ಸುಳ್ಳುಗಳ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ದ. ಕ. ಜಿಲ್ಲಾ ಬಿಜೆಪಿ ಆರೋಪಿಸಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನತೆಗೆ ಸ್ಪಂದಿಸುತ್ತಿದ್ದಾರೆ. ಸರಕಾರದ ಕೆಲಸಗಳನ್ನು ಜನತೆ ಸ್ವಾಗತಿಸುತ್ತಿರುವಾಗ ಕಾಂಗ್ರೆಸ್ ಸುಳ್ಳುಗಳ ಸರಮಾಲೆಯನ್ನು ಜನತೆಯ ಮುಂದಿಟ್ಟು ಹಾದಿ ತಪ್ಪಿಸುತವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ನಾಯಕರಾದ ಬಿ. ರಮಾನಾಥ ರೈ, ಯು. ಟಿ. ಖಾದರ್ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಿಜೆಪಿಗೆ ವಲಸೆ ಕಾರ್ಮಿಕರನ್ನು ಉಳಿಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ ಎಂದು ರೈ ಅವರು ಹೇಳುತ್ತಿದ್ದಾರೆ. ವಲಸೆ ಕಾಮಿಕರ ಬಿಡಾರಕ್ಕೆ ಹೋಗಿ ಅವರನ್ನು ಜಿಲ್ಲಾಡಳಿತದ ವಿರುದ್ಧ ಎತ್ತಿಕಟ್ಟಿದ್ದು ಯಾರು ಎಂದು ಅವರು ಪ್ರಶ್ನಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಕಿಟ್ ವಿತರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಯು. ಟಿ. ಖಾದರ್ ವ್ಯಂಗ್ಯ ಮಾಡಿದ್ದಾರೆ. ಇವರಿಗೆ ಸಂಸದರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕೊರೊನಾದ ಆರಂಭದ ದಿನಗಳಲ್ಲಿಯೇ ತನ್ನ ಕಚೇರಿಯಲ್ಲಿ ‘ವಾರ್ ರೂಂ.’ ತೆರೆದು ಜನತೆಯ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಕೆಲಸವನ್ನು ಸಂಸದರು ಮಾಡುತ್ತಿದ್ದಾರೆ. ಖಾದರ್ ಕ್ಷೇತ್ರದಲ್ಲೂ ಸಹಾಯವಾಣಿ ತೆರೆದು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗುತ್ತಿದೆ ಎಂದರು.
ಜಿಲ್ಲೆಯಾದ್ಯಂತ ಬಿಜೆಪಿಯಿಂದ ೨.೭೦ ಲಕ್ಷ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ೩.೬೨ ಲಕ್ಷದಷ್ಟು ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ತಯಾರಿಸಿದ ೧.೭೦ ಲಕ್ಷ ಮಾಸ್ಕ್‌ಗಳನ್ನು ಜನತೆಗೆ ನೀಡಲಾಗಿದೆ, ೬೩ ಸಾವಿರ ಮಂದಿಗೆ ಔಷಧ, ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸಲಾಗಿದೆ. ಬಿಜೆಪಿ ಇದನ್ನು ಪ್ರಚಾರಕ್ಕಾಗಿ ಮಾಡಿಲ್ಲ. ಯಾವುದೇ ಜಾತಿ, ಧರ್ಮ ನೋಡದೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದೆ. ಆದರೆ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರು ಇರುವ ಓಣಿ, ಮನೆಗಳಿಗೆ ಕಿಟ್ ನೀಡಿದೆ ಎಂದು ಟೀಕಿಸಿದರು. ವಿದೇಶದಲ್ಲಿರುವ ಕನ್ನಡಿಗರನ್ನು ಊರಿಗೆ ತರಿಸುವ ಕೆಲಸ ಹಂತ ಹಂತವಾಗಿ  ಮಾಡಲಾಗುತ್ತಿದೆ. ಕಾಂಗ್ರೆಸ್ ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಹೊರಜಿಲ್ಲೆ, ಹೊರರಾಜ್ಯ, ವಿದೇಶದಲ್ಲಿರುವವರನ್ನು ಹಂತಹಂತವಾಗಿ ಕರೆತರಲಾಗುತ್ತಿದೆ. ಆದರೂ ಕಾಂಗ್ರೆಸ್ ಕೀಳುಮಟ್ಟದ ಪ್ರಚಾರಕ್ಕೆ ಮುಂದಾಗಿದೆ ಎಂದು ಸುದರ್ಶನ್ ಹೇಳಿದರು.
ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ರವಿಶಂಕರ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ರಾಮದಾಸ ಬಂಟ್ವಾಳ, ಜಿತೇಂದ್ರ ಕೊಟ್ಟಾರಿ, ರಣದೀಪ ಕಾಂಚನ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss