Tuesday, July 5, 2022

Latest Posts

ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ: ಈರಣ್ಣ ಕಡಾಡಿ ಕರೆ

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಪಕ್ಷ ಮತ್ತು ಸರ್ಕಾರದ ನಡುವೆ ರಾಯಭಾರಿಗಳಾಗಿ ರೈತ ಮೋರ್ಚ ಪದಾಧಿಕಾರಿಗಳು ಕೆಲಸ ಮಾಡಬೇಕು. ಆ ಮೂಲಕ ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ಯಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಕರೆ ನೀಡಿದರು.
ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದಾವಣಗೆರೆ ವಿಭಾಗದ ರೈತ ಮೋರ್ಚ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಳು ಮೋರ್ಚ ನಮ್ಮ ಜೊತೆಯಲ್ಲಿದೆ. ಯಾವುದೇ ಜಾತಿ, ಲಿಂಗ ಭೇದವಿಲ್ಲದೆ ಕ್ರಿಯಾಶೀಲವಾಗಿ ಕೆಲಸ ಮಾಡಬಹುದಾದ ಮೋರ್ಚ ಎಂದರೆ ಅದು ರೈತ ಮೋರ್ಚ. ಹಾಗಾಗಿ ರೈತ ಮೋರ್ಚದಲ್ಲಿರುವ ಪದಾಧಿಕಾರಿಗಳು ಹೆಮ್ಮೆಪಟ್ಟುಕೊಳ್ಳಬೇಕು ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿರುವುದರಿಂದ ನೀವುಗಳು ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿಲ್ಲ. ರೈತರಿಗಾಗಿ ನೂರಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿರುವುದನ್ನು ರೈತರಿಗೆ ಮುಟ್ಟಿಸುವಲ್ಲಿ ವಿಶೇಷ ಕಾರ್ಯಪಡೆ ರೈತ ಮೋರ್ಚ ಕೆಲಸ ಮಾಡಬೇಕು ಎಂದು ರೈತ ಪದಾಧಿಕಾರಿಗಳಿಗೆ ಈರಣ್ಣ ಕಡಾಡಿ ಸೂಚಿಸಿದರು.
ನಿಜವಾದ ರೈತನಿಗೆ ಹೊರಗೆ ಬಂದು ಸಮಯ ಕೊಡಲು ಆಗುವುದಿಲ್ಲ. ಫಸಲ್‌ಭೀಮ ಯೋಜನೆ, ಕಿಸಾನ್ ಸಮ್ಮಾನ್, ಸಾಯಿಲ್ ಹೆಲ್ತ್ ಕಾರ್ಡ್‌ನ್ನು ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಅನಂತಕುಮಾರ್ ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವರಾಗಿದ್ದಾಗ ಬೇವು ಲೇಪಿತ ಯೂರಿಯ ಕೊಟ್ಟರು. ಗುಣಮಟ್ಟದ ಬೀಜ, ಗೊಬ್ಬರ, ಕೃಷಿ ಸಂಚಾಯಿ ಯೋಜನೆಯನ್ನು ರೈತರಿಗೆ ಕೇಂದ್ರ ಸರ್ಕಾರ ಅನುಷ್ಟಾನಕ್ಕೆ ತಂದಿದೆ. ಬೆಂಬಲ ಬೆಲೆ, ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿ ಮೂಲಕ ರೈತರ ಉತ್ಪನ್ನ ಖರೀಧಿಸುವ ಯೋಜನೆ ರೈತರಿಗೆ ವರದಾನವಾಗಿದೆ ಎಂದು ಹೇಳಿದರು.
ರೈತರು ಆದಾಯ ದ್ವಿಗುಣಗೊಳಿಸಿಕೊಂಡು ಜೀವನದಲ್ಲಿ ಒಳ್ಳೆಯ ದಿನಗಳನ್ನು ಕಾಣಲಿ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಕಿಸಾನ್ ಮಾನ್ ಧನ್, ಮೊಬೈಲ್ ಆಪ್ ಮೂಲಕ ಸ್ವತಃ ರೈತನೆ ತನ್ನ ಬೆಳೆಯನ್ನು ಸರ್ವೆ ಮಾಡಿ ದಾಖಲಿಸಿಕೊಳ್ಳುವ ಸುವರ್ಣಾವಕಾಶ ಒದಗಿಸಿದೆ. ರೈತರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಹೇಗೆ ಪಡೆದುಕೊಳ್ಳಬೇಕೆಂಬ ಸರಿಯಾದ ಮಾಹಿತಿ ಸಾಕಷ್ಟು ರೈತರಿಗೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ರೈತ ಮೋರ್ಚ ಪದಾಧಿಕಾರಿಗಳು ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ಕೃಷಿ ಕ್ಷೇತ್ರ ದಿನ ದಿನಕ್ಕೂ ಹೆಚ್ಚು ಸಮಸ್ಯೆ ಸವಾಲು ಸಂಕಷ್ಟಗಳನ್ನು ಎದುರಿಸುತ್ತಿದೆ. ಕೆಲವೊಮ್ಮೆ ಬೆಳೆಗೆ ಬೆಂಬಲ ಬೆಲೆ ಸಿಗುವುದಿಲ್ಲ. ನೀರು, ವಿದ್ಯುತ್ ಸಮಸ್ಯೆ ನಡುವೆ ಪ್ರವಾಹ ಎದುರಾದಾಗ ರೈತನ ಬೆಳೆಗಳೆಲ್ಲಾ ಕೊಚ್ಚಿ ಹೋಗುತ್ತದೆ. ಶ್ರದ್ದೆ, ಬದ್ದತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ರೈತ ಮೋರ್ಚ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ರೈತ ಪರ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಸದಾ ಬರಪೀಡಿತ ಪ್ರದೇಶವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ೨೫-೩೦ ಸಾವಿರ ರೈತ ಕುಟುಂಬಗಳಿವೆ. ಅವರೆಲ್ಲ ಹಳ್ಳಿಗಳಿಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಹೋರಾಟದ ಫಲವಾಗಿ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಭದ್ರೆ ನೀರು ಬಂದಿದೆ. ಕಳೆದ ೨೫ ವರ್ಷಗಳಿಂದಲೂ ಮುಚ್ಚಿರುವ ಹಿರಿಯೂರು ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ ಜಿಲ್ಲೆಯ ರೈತರ ನೆರವಿಗೆ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಈರಣ್ಣ ಕಡಾಡಿ ಅವರಲ್ಲಿ ವಿನಂತಿಸಿದರು.
ಬಿಜೆಪಿ ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಮೋರ್ಚಕ್ಕಿಂತ ವಿಭಿನ್ನವಾದುದು ರೈತ ಮೋರ್ಚ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ರೈತ ಮೋರ್ಚ ಪದಾಧಿಕಾರಿಗಳು ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲಿದೆ ಎಂದು ತಿಳಿಸಿದರು.
ರೈತರ ಜೀವನ ಹಸನಾಗಬೇಕಾದರೆ ಹಿರಿಯೂರಿನ ಸಕ್ಕರೆ ಕಾರ್ಖಾನೆ ಮತ್ತೆ ಆರಂಭವಾಗಬೇಕು. ಇಂತಹ ರೈತಪರ ಕೆಲಸಗಳಾದಲ್ಲಿ ಪಕ್ಷಕ್ಕೆ ಬಲ ತುಂಬುವ ಕೆಲಸ ರೈತ ಮೋರ್ಚ ಮಾಡಲಿದೆ ಎಂದು ರೈತ ಮೋರ್ಚ ರಾಜ್ಯಾಧ್ಯಕ್ಷರಿಗೆ ಭರವಸೆ ನೀಡಿದರು.
ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗಗೌಡ್ರು, ರಾಜ್ಯ ಉಪಾಧ್ಯಕ್ಷ ಲೋಕೇಶ್, ಸಹ ಪ್ರಧಾನ ಕಾರ್ಯದರ್ಶಿ ಜೈಪ್ರಕಾಶ್, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಡಿ.ರಮೇಶ್, ದಾವಣಗೆರೆ ರೈತ ಮೋರ್ಚ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss