Wednesday, August 10, 2022

Latest Posts

ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 31 ಜನರಿಂದ ಕೋಟ್ಯಾಂತರ ರೂ. ಹಣ ಸುಲಿಗೆ: ಇಬ್ಬರ ಬಂಧನ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಉನ್ನತಾಧಿಕಾರಿಯ ಸೋಗು ಹಾಕಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ರಾಜ್ಯ ವಿವಿಧ ಜಿಲ್ಲೆಗಳ ಸುಮಾರು 31 ಜನರಿಂದ ಕೋಟ್ಯಾಂತರ ರೂ. ಹಣ ಸುಲಿಗೆ ಮಾಡಿ ವಂಚಿಸಿದ್ದ ಪ್ರಕರಣವೊಂದನ್ನು ಬೇಧಿಸಿರುವ ನಗರಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಹೆಚ್.ಅಕ್ಷಯ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿನ ನಾಗರಬಾವಿ, ಭೈರವೇಶ್ವರ ನಗರದ ನಿವಾಸಿ ಪ್ರಭಾಕರ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಆತನೊಂದಿಗೆ ಆತನ ಕಾರು ಚಾಲಕ ಶಿವರಾಜ್‍ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸುಮಾರು 2.50 ಕೋಟಿ ರೂ.ಗಳಿಗೂ ಹೆಚ್ಚು ಹಣಕ್ಕೆ ಪಂಗನಾಮ ಹಾಕಿದ್ದಾನೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡಿಕೊಂಡಿದ್ದ ಪ್ರಭಾಕರ ತಾನು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯಲ್ಲಿ ಉನ್ನತಾಧಿಕಾರಿ ಎಂದು ಹೇಳಿಕೊಂಡು ಅದಕ್ಕಾಗಿ ಬೋರ್ಡ್‍ನ ಚೀಫ್ ಪರ್ಸನಲ್ ಸೆಕ್ರೇಟರಿ ಎಂದು ನಕಲಿ ಗುರುತಿನ ಚೀಟಿಯನ್ನೂ ಮಾಡಿಸಿಕೊಂಡು ಅದನ್ನೇ ತೋರಿಸಿ ಉನ್ನತಾಧಿಕಾರಿಗಳ ರೀತಿಯಲ್ಲೇ ನಟಿಸಿ ಸರ್ಕಾರಿ ಕೆಲಸದ ಕನಸು ಕಾಣುತ್ತಿದ್ದ ಅಮಾಯಕರನ್ನು ನಂಬಿಸಿ ವಂಚನೆ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ.
ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷಾ ಮಂಡಳಿ, ಬೆಸ್ಕಾಂ, ಇಸ್ರೋ, ವಿಟಿಯು, ಅಂಚೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಅವರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮುಂಗಡವಾಗಿ ಲಕ್ಷಾಂತರ ರೂ.ಹಣ ಪಡೆಯುತ್ತಿದ್ದ.
ಬೇರೆ ಇಲಾಖೆಗಳ ಅಧಿಕೃತ ವೆಬ್‍ಸೈಟ್‍ಗಳನ್ನು ಸದಾ ಗಮನಿಸುತ್ತಿದ್ದ ಆರೋಪಿ ಪ್ರಭಾಕರ ಅದರಲ್ಲಿ ಉದ್ಯೋಗಕ್ಕಾಗಿ ಅರ್ಜಿ ಅಹ್ವಾನಿಸಿರುವ ಮಾಹಿತಿ ಪಡೆಯುತ್ತಿದ್ದ ಅಲ್ಲದೆ ಅರ್ಜಿ ಸಲ್ಲಿಸಿದವರ ಮಾಹಿತಿಯನ್ನೂ ಸಂಗ್ರಹಿಸಿ ಅವರನ್ನೇ ಟಾರ್ಗೆಟ್ ಮಾಡಿ ಸುಲಭವಾಗಿ ವಂಚನೆ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ಎಫ್‍ಡಿಸಿ ಅಡ್ಮಿನ್ ಹುದ್ದೆಗೆ 12 ರಿಂದ 13 ಲಕ್ಷ ರೂ., ಕಂಪ್ಯೂಟರ್ ಆಪರೇಟರ್ ಹುದ್ದೆಗೆ 5 ರಿಂದ 7 ಲಕ್ಷ ರೂ., ಹಾಗೂ ಗ್ರೂಪ್ ಡಿ.ಹುದ್ದೆಗೆ 5 ಲಕ್ಷ ರೂ.ಗಳನ್ನು ನಿಗಧಿ ಮಾಡಿಕೊಂಡಿದ್ದ. ಅಭ್ಯರ್ಥಿಗಳು ಹಾಗೂ ಅವರ ಪೋಷಕರನ್ನು ನಂಬಿಸಿ ಬೆಂಗಳೂರು ನಗರದ ಪ್ರತಿಷ್ಠಿತ ಹೋಟೆಲ್‍ಗಳಿಗೆ ಕರೆಸಿಕೊಂಡು ಇನ್ನಷ್ಟು ವಿಶ್ವಾಸಗಳಿಸುತ್ತಿದ್ದ.
ಹಣ ಕೊಟ್ಟವರಿಗೆ ಈತನೇ ಬೇರೆ ಬೇರೆ ಇಲಾಖೆಯ ನೇಮಕಾತಿ ಪತ್ರಗಳನ್ನೂ ಸಹ ಮುದ್ರಿಸಿ ಕೊಡುತ್ತಿದ್ದುದಲ್ಲದೆ, ಇಲಾಖೆಗಳ ನಕಲಿ ಲೆಟರ್ ಹೆಡ್‍ಗಳಲ್ಲಿ ನೌಕರಿ ಖಾತರಿ ಆಗಿರುವ ಬಗ್ಗೆ ಟೈಪ್ ಮಾಡಿ ಅಭ್ಯರ್ಥಿಗಳಿಗೆ ನೀಡಿ ಮೊದಲ ಕಂತಿನ ಹಣವನ್ನು ಪಡೆಯುತ್ತಿದ್ದ. ಎರಡನೇ ಹಂತದ ಹಣ ಕೊಟ್ಟ ನಂತರ ನಿಮಗೆ 8 ರಿಂದ 12 ತಿಂಗಳು ಪ್ರೊಬೇಷನರಿ ಅವಧಿ ಇದ್ದು, ಆ ತಿಂಗಳಲ್ಲಿ ಸ್ಟೈಫಂಡ್ ಆಗಿ 8 ರಿಂದ 10 ಸಾವಿರ ಸಂಬಳ ಬರುತ್ತದೆ. ಪ್ರೊಬೆಷನರಿ ಅವಧಿ ಮುಗಿದ ಕೂಡಲೇ ಕೆಸಲಕ್ಕೆ ಸೇರ್ಪಡೆಗೊಳ್ಳುವ ಪತ್ರದ ಜೊತೆಗೆ ಕೆಜಿಐಡಿ ನಂಬರ್, ವೇತನದ ಅಕೌಂಟ್ ನಂಬರ್ ಬರುತ್ತದೆ. ನಂತರ ನೀವು ಕೆಲಸಕ್ಕೆ ಬಂದು ವರದಿ ಮಾಡಿಕೊಳ್ಳಬಹುದು ಎಂದು ನಂಬಿಸುತ್ತಿದ್ದ. ಆತನ ಖಾತೆಯಿಂದಲೇ ಅಭ್ಯರ್ಥಿಗಳ ಖಾತೆಗೆ ಮೊದಲು ತಿಂಗಳ ವೇತನ ಎಂದು 10 ಸಾವಿರ ರೂ.ಗಳನ್ನೂ ಜಮೆ ಮಾಡುತ್ತಿದ್ದ.
ಇದರಿಂದಾಗಿ ಹಲವರು ತಾವೂ ವಂಚನೆಗೊಳಗಾಗಿ ತಮ್ಮ ಸ್ನೇಹಿತರಿಗೂ ವಿಚಾರ ತಿಳಿಸಿ ಅವರಿಗೂ ಕೆಲಸ ಕೊಡಿಸುವ ಪ್ರಯತ್ನ ಮಾಡಿ ಅರಿವಿಲ್ಲದೆ ವಂಚಕರ ಖೆಡ್ಡಾಕ್ಕೆ ಬಿದ್ದಿರುವ ಪ್ರಕರಣಗಳೂ ಇವೆ.
ಅರೋಪಿಯ ವಂಚನೆ ಜಾಲಕ್ಕೆ ಬಿದ್ದವರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರು ಹೆಚ್ಚಿನವರಿದ್ದಾರೆ, ಉಳಿದಂತೆ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಹಲವು ಮಂದಿ ವಂಚನೆಗೊಳಗಾಗಿದ್ದಾರೆ.
ಬೆಂಗಳೂರಿನ ಈತನ ಮನೆಯನ್ನು ಪೊಲೀಸರು ಪರಿಶೀಲಿಸಿದಾಗ ಸುಮಾರು 48 ಜನ ಅಭ್ಯರ್ಥಿಗಳ ಮೂಲ ಶೈಕ್ಷಣಿಕ ದಾಖಲಾತಿಗಳು, ಆಧಾರ್ ಕಾರ್ಡ್‍ಗಳು, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‍ಗಳು ಪತ್ತೆಯಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಯು ಅಮಾಯಕರಲ್ಲಿ ನೌಕರಿಯ ಕನಸು ಬಿತ್ತಿ ಸುಮಾರು 2.5 ಕೊಟಿ ರೂ.ಗಳಿಗೆ ಹೆಚ್ಚಿನ ಹಣವನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಇದೇ ಹಣದಲ್ಲಿ 15 ಲಕ್ಷ ರೂ. ಬೆಲೆ ಬಾಳುವ ಒಂದು ಇನ್ನೋವಾ ಕಾರನ್ನು ಖರೀದಿಸಿದ್ದಾನೆ.
2.43 ಕೊಟಿ ರೂ. ಬೆಲೆಯ ಹೊಸದಾಗಿ ಕಟ್ಟಿರುವ ಮನೆ ಖರೀದಿಗೆ ಒಪ್ಪಂದವನ್ನೂ ಮಾಡಿಕೊಂಡು ಅದಕ್ಕಾಗಿ 15.25 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿರುವುದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. 40 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ಮಾಡಿಸಿಕೊಂಡಿದ್ದು, ಅದನ್ನೂ ವಶಕ್ಕೆ ಪಡೆಯಲಾಗಿದೆ.
ವಂಚನೆಯ ಹಣದಲ್ಲೇ ತೀರ್ಥಯಾತ್ರೆಗಳನ್ನು ಕೈಗೊಂಡಿರುವ ಆರೋಪಿ ಹಲವು ಬಾರಿ ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸಿದ್ದಾನೆ. ವೈಷ್ಣೋದೇವಿ, ಯಮುನೋತ್ರಿ, ಗಂಗೋತ್ರಿ, ಹರಿದ್ವಾರ, ರಿಷಿಕೇಶ, ಗಯಾ, ಬದರಿನಾಥ, ಕೇದಾರನಾಥ, ಪಂಡರಾಪುರ, ಶಿರಡಿ, ಮಂತ್ರಾಲಯ ಹೀಗೆ ಎರಡು ಬಾರಿ ತೀರ್ಥಯಾತ್ರೆ ಮಾಡಿದ್ದು, ಇದಕ್ಕಾಗಿ 35 ಲಕ್ಷ ರೂ. ಖರ್ಚು ಮಾಡಿದ್ದಾನೆ.
ತಾನು ಮಾಡುತ್ತಿದ್ದ ವಂಚನೆ ಕೃತ್ಯಕ್ಕೆ ತಪ್ಪೊಪ್ಪಿಗೆಗಾಗಿ ವಾರಕ್ಕೊಮ್ಮೆ ತಿರುಪತಿಗೆ ಭೇಟಿ ನೀಡುತ್ತಿದ್ದ ಈತ 5 ಲಕ್ಷ ರೂ. ಹಣವನ್ನು ಹುಂಡಿಗೆ ಹಾಕಿದ್ದಾನೆ. ಇದಲ್ಲದೆ 10 ಲಕ್ಷ ರೂ.ಗಳನ್ನು ಇತರೆ ವೆಚ್ಚಕ್ಕೆ ಖರ್ಚು ಮಾಡಿದ್ದಾನೆ. ಐಷಾರಾಮಿ ಹೋಟೆಲ್‍ಗಳಲ್ಲಿ ತಂಗಿದ್ದಕ್ಕೆ ಸುಮಾರು 10 ಲಕ್ಷ ರೂ. ಖರ್ಚು ಮಾಡಿರುವುದ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಯು ಮನೆ ಖರೀದಿಗೆ ನೀಡಿದ 15.25 ಲಕ್ಷ ರೂ. ಸೇರಿ ಮನೆಯಲ್ಲಿ ಸಿಕ್ಕಿರುವ 2 ಲಕ್ಷ ರೂ. ನಗದು, 36 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ಒಂದು ಇನ್ನೋವಾ ಕಾರು, 2000 ಇಸ್ರೋದ ಖಾಲಿ ಲೆಟರ್‍ಹೆಡ್‍ಗಳು, 3000 ಕೆಸಿಇಇಬಿ ಇಲಾಕೆ ಲೆಟರ್‍ಹೆಡ್‍ಗಳು, 100 ಅಂಚೆ ಇಲಾಕೆ ಲೆಟರ್‍ಹೆಡ್‍ಗಳು, 3000 ಪದವೀ ಪೂರ್ವ ಶಿಕ್ಷಣ ಮಂಡಳಿ ಲೆಟರ್ ಹೆಡ್‍ಗಳು, ಬೆಂಗಳೂರಿನ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ಬೆಂಗಳೂರಿನ ಸುಮತಿ ಎಂಟರ್ ಪ್ರೈಸಸ್ ಮತ್ತು ಎಸ್‍ಎಲ್‍ಬಿ ಪ್ರಿಂಟಿಂಗ್ ಪ್ರೆಸ್‍ಗಳಲ್ಲಿ ನಕಲಿ ದಾಖಲಿಎಗಳನ್ನು ಮುದ್ರಿಸುತ್ತಿದ್ದು, ಅಲ್ಲಿಗೂ ದಾಳಿ ನಡೆಸಿ ಸಾಕಷ್ಟು ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪ್ರಿಂಟಿಂಗ್ ಪ್ರೆಸ್‍ನವರನ್ನೂ ನಂಬಿಸಿ, ವಂಚಿಸಿರುವುದು ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುವ ಚಿಕ್ಕಗೌಜದ ಉಮೇಶ್ ಎಂಬುವವರು ನೀಡಿದ ದೂರಿನ ಮೇರಗೆ ಈ ಬೃಹತ್ ಜಾಲ ಬೆಳಕಿಗೆ ಬರುವಂತಾಗಿದೆ. ಹೋಟೆಲ್‍ಗೆ ಗ್ರಾಹಕನಾಗಿ ಹೋಗುತ್ತಿದ್ದ ಆರೋಪಿ ಪ್ರಭಾಕರ್ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಕೆಲಸ ಕೊಡಿಸುವುದಾಗಿ 2 ಲಕ್ಷ ರೂ. ಮುಂಗಡ ಪಡೆದಿದ್ದ. ಕೆಲವು ದಿನಗಳ ನಂತರ ಅನುಮಾನಗೊಂಡ ಉಮೇಶ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ವಿಚಾರ ಮಾಡಿದಾಗ ಪ್ರಭಾಕರ ಎನ್ನುವ ವ್ಯಕ್ತಿ ಅಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ನಗರ ಪೊಲೀಸರಿಗೆ ದೂರು ನೀಡಿದ್ದರು.
ನಗರ ಪೊಲೀಸ್ ಠಾಣಾಧಿಕಾರಿ ಟಿ.ಐ.ತೇಜಸ್ವಿ, ಎಎಸ್‍ಐ ರಮೇಶ್, ದಯಾನಂದ್, ಲೋಹಿತ್, ಶಶಿಧರ್, ನವೀನ್, ಮಧುಕುಮಾರ್, ಗುರುಪ್ರಸಾದ್, ಹೆಚ್.ಯು. ಮೇಘಾ ಅವರನ್ನೊಳಗೊಂಡ ವಿಶೇಷ ತಂಡ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss