ರಾಮನಗರ: ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೈಟೆಕ್ ಕಿರು ಸಭಾಂಗಣ ವನ್ನು ನಿರ್ಮಿಸಿಕೊಡುವುದಾಗಿ ಉದ್ಯಮಿಗಳು ಹಾಗೂ ಪಂಚಮಿ ಗ್ರೂಪ್ಸ್ ಮಾಲೀಕರಾದ ಪಿ. ಪ್ರಸನ್ನ ತಿಳಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರ ಕೋರಿಕೆಯ ಮೇರೆಗೆ ಕಾಲೇಜಿಗೆ ಆಗಮಿಸಿದ ಅವರು, ಈ ವಿಚಾರವನ್ನು ಘೋಷಿಸಿದರು.
ನಮ್ಮ ತಾಲೂಕಿನ ಕಾಲೇಜು ಇಡೀ ರಾಜ್ಯದಲ್ಲೇ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವುದು ಸಂತಷ ತಂದಿದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದು ಈ ಕಾಲೇಜಿನ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಕಾಲೇಜಿಗೆ ನನ್ನ ತಂದೆತಾಯಿಯ ಹೆಸರಿನಲ್ಲಿ ಕಿರು ಹೈಟೆಕ್ ಸಭಾಂಗಣ ನಿರ್ಮಿಸಿ ಕೊಡಲು ಉತ್ಸುಕನಾಗಿದ್ದೇನೆ. ಕೆಲವೇ ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಕಾಲೇಜಿನ ಸೇವೆಗೆ ಸಮರ್ಪಿಸಲಾಗುವುದು.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಭಾಂಗಣವನ್ನು ವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿ.ವೆಂಕಟೇಶ್ ಮಾತನಾಡಿ, ಸಮುದಾಯದ ಜೊತೆಗೂಡಿ ಕಾಲೇಜಿನ ಅಭಿವೃದ್ಧಿ ಮಾಡುವುದು ಉತ್ತಮವಾದ ಮಾರ್ಗ.ಈ ದೆಸೆಯಲ್ಲಿ ಕಾಲೇಜಿನ ಅಭಿವೃದ್ಧಿಯ ದೃಷ್ಟಿಯಿಂದ ಲಕ್ಷಾಂತರ ಮೌಲ್ಯದ ಸಭಾಂಗಣ ನಿರ್ಮಿಸಿಕೊಡಲು ಸಮ್ಮತಿಸಿರುವ ಪ್ರಸನ್ನರವರನ್ನು ಕಾಲೇಜಿನ ಸಮಸ್ತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಅರ್ಥಶಾಸ್ತ್ರ ವಿಭಾಗದ ಡಾ. ಮಾಹಿಗೇಗೌಡ ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ಈ ಹಿಂದಿನಿ0ದಲೂ ಹಿರಿಯ ವಿದ್ಯಾರ್ಥಿಗಳ ಸಂಘ ಶ್ರಮಿಸುತ್ತಿದೆ. ಯಶಸ್ವಿ ಉದ್ಯಮಿ ಎಂದು ಗುರುತಿಸಿಕೊಂಡಿರುವ ಉದ್ಯಮಿ ಪ್ರಸನ್ನ ತನ್ನ ತಾಲೂಕಿನ ಸರ್ಕಾರಿ ಕಾಲೇಜಿನ ಅಭಿವೃದ್ದಿಗಾಗಿ ಮುಂದಡಿ ಇಟ್ಟಿರುವುದು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಇದೇ ವೇಳೆ ಪಿ.ಪ್ರಸನ್ನರವರನ್ನು ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಪರವಾಗಿ ಸನ್ಮಾನಿಸಲಾಯಿತು. ಈ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಉಜ್ಜನಹಳ್ಳಿ ರವೀಶ್, ಉಪಾಧ್ಯಕ್ಷರಾದ ತಿಟ್ಟ ಮಾರನಹಳ್ಳಿ ಅಭಿಲಾಷ್, ಹರೀಶ, ಜಂಟಿ ಕಾರ್ಯದರ್ಶಿ ಎಲೇಕೇರಿ ಮಂಜುನಾಥ, ಪ್ರಾಧ್ಯಾಪಕ ಮಂಜುನಾಥ್ ಉಪಸ್ಥಿತರಿದ್ದರು.