ವಿಧಾನಸಭೆ: ಸರ್ಕಾರಿ ಭೂಮಿ ಕಬಳಿಕೆದಾರರು ಹಾಗೂ ಖಾಸಗಿಯವರಿಗೆ ಪರಭಾರೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಭೂಮಿಯ ದಾಖಲೆ ಗಳನ್ನು ತಿದ್ದಿ ಖಾಸಗಿಯವರಿಗೆ ಪರಭಾರೆ ಮಾಡುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ ತೆರವುಗೊಳಿಸಲಾಗುತ್ತಿದೆ. ತೆರವುಗೊಳಿಸಿದ್ದರಲ್ಲಿ 2500 ಎಕರೆ ಭೂಮಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸಿರುವ ಸರ್ಕಾರಿ ಭೂಮಿ ಕಾಪಾಡಿಕೊಳ್ಳಲು 100 ಕೋಟಿ ರೂಪಾಯಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೇಡಿಕೆ ಮಂಡಿಸಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ಜಮೀನು ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಒತ್ತುವರಿ ತೆರವುಗೊಳಿಸಿದ ಜಮೀನುಗಳನ್ನು ಒಂದು ಲಕ್ಷ ಮನೆ ಯೋಜನೆ ಸೇರಿದಂತೆ ಯೋಜನೆಗಳಿಗೆ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು. ಬ್ಯಾಟರಾಯನಪುರದಲ್ಲಿ ನಡೆದ ಅಕ್ರಮದ ಬಗ್ಗೆ ಗಮನಕ್ಕೆ ತಂದ ಕೂಡಲೇ ಅಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದೇವೆ. ಆದರೆ ಅವರು ನ್ಯಾಯಾಲಯಕ್ಕೆ ಹೋಗಿ ಮತ್ತೆ ಅದೇ ಜಾಗದಲ್ಲಿ ಬಂದು ಕುಳಿತುಕೊಳ್ಳುತ್ತಿzರೆ, ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ ಎಂದರು.
ಪೋಡಿ ಮುಕ್ತಕ್ಕೆ ಹಲವು ಕ್ರಮ: ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಸರ್ಕಾರ ಆದ್ಯತೆ ನೀಡಲಿದ್ದು ಹಲವು ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಬೆಳ್ಳಿ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 14 ಸೆಪ್ಟೆಂಬರ್ 2015 ರಂದು ಅಭಿಯಾನ 174 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗಿತ್ತು. ಇದೀಗ ಅಭಿಯಾನಕ್ಕೆ ವೇಗ ನೀಡಲಾಗುವುದು ಎಂದು ಉತ್ತರಿಸಿದರು. ಎಲ್ಲ ಜಿಲ್ಲಾಧಿಕಾರಿಗಳು, ಉಪ ಭಾಗಾಧಿಕಾರಿಗಳು, ತಹಶೀಲ್ದಾರರು ತಿಂಗಳಲ್ಲಿ ಒಂದು ದಿವಸ ತಮ್ಮ ವ್ಯಾಪ್ತಿಯ ಜಿಲ್ಲೆಯೊಂದಕ್ಕೆ ತೆರಳಿ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಈ ಕಾರ್ಯಕ್ರಮ ಜಾರಿಗೆ ಬರಲಿದೆ ಎಂದು ವಿವರಿಸಿದರು.
ಸದಸ್ಯರಾದ ರಮೇಶ್ ಕುಮಾರ್, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ ಮತ್ತಿತರರು ವಿಷಯ ಪ್ರಸ್ತಾಪಿಸಿ, ಜಮೀನಿನಲ್ಲಿ ಸರ್ವೇ ಮಾಡುವಲ್ಲಿ ವಿಳಂಬವಾಗುತ್ತಿದ್ದು ಈ ಸಮಸ್ಯೆ ಪರಿಹರಿಸಬೇಕೆಂದು ಕೋರಿದರು. ಇದಕ್ಕೆ ಉತ್ತರಿಸಿದ ಸಚಿವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಣ ನಿಗದಿಯಷ್ಟೇ : ಮಿನಿ ವಿಧಾನಸೌಧಗಳನ್ನು ಕಂದಾಯ ಇಲಾಖೆ ನಿರ್ಮಿಸುವುದಿಲ್ಲ. ನಾವು ಹಣ ನಿಗದಿ ಮಾಡುತ್ತೇವೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಂದೊಂದು ತಾಲೂಕಿನಲ್ಲಿ ಒಂದೊಂದು ಮೊತ್ತ ಆಗುತ್ತಿದೆ. ಆದ್ದರಿಂದ 10 ಕೋಟಿ ರೂ. ಮೊತ್ತದಲ್ಲೇ ಕಟ್ಟಡ ಪೂರ್ಣಗೊಳಿಸಬೇಕು ಎಂದು ಆರ್.ಅಶೋಕ್ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ಪೂರ್ಣಿಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 10 ಕೋಟಿ ರೂ. ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಮತ್ತು ಹೌಸಿಂಗ್ ಬೋರ್ಡ್ಗೆ ಸೂಚಿಸಲಾಗುವುದು ಎಂದರು.