Monday, July 4, 2022

Latest Posts

ಸರ್ಕಾರಿ ಶಾಲೆಗಳಿಗೆ ಇನ್ನು ಅಚ್ಛೇ ದಿನ್

ಬೆಂಗಳೂರು: ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಕ್ಯೂ ನಿಲ್ಲುವಂತಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಶಯ ವ್ಯಕ್ತ ಪಡಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ಡಾ. ಜಯಮಾಲಾ ರಾಮ ಚಂದ್ರ ಪ್ರಶ್ನೆಗೆ ಉತ್ತರಿ ಸುತ್ತಾ, ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಅನಿವಾರ್ಯವಾಗಿಸುವ ರೀತಿಯಲ್ಲಿ ಪ್ರಗತಿಗೆ ಕ್ರಮ ಕೈಗೊಳ್ಳುತ್ತೇವೆ. ದೆಹಲಿಯ ಶಿಕ್ಷಣ ವ್ಯವಸ್ಥೆಗೂ ರಾಜ್ಯಕ್ಕೂ ಹೋಲಿಕೆ ಮಾಡಲಾಗುವುದಿಲ್ಲ. ಅಲ್ಲಿರುವ ಒಟ್ಟು ಶಾಲೆಗಳ ಸಂಖ್ಯೆ 2,784 ಆದರೆ ರಾಜ್ಯದಲ್ಲಿ ಕೇವಲ ಸರ್ಕಾರಿ ಶಾಲೆಗಳೇ  50,184 ಇವೆ. ಆದರೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ದೆಹಲಿಯಲ್ಲಿರುವ ಹ್ಯಾಪಿನೆಸ್ ಕರಿಕ್ಯುಲಂ ವ್ಯವಸ್ಥೆಯಲ್ಲಿ ಸಂಭ್ರಮದ ಶನಿವಾರ ಎಂದು ಜಾರಿಗೊಳಿಸಲಾಗಿದೆ ಎಂದರು.

ಸರದಿ ನಿಲ್ಲಬೇಕು: ಮುಂದಿನ ಮುರ್ನಾಲ್ಕು ವರ್ಷದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಸರದಿ ನಿಲ್ಲಬೇಕು ಅಂತಹ ಸ್ಥಿತಿ ನಿರ್ಮಿಸುತ್ತೇವೆ. ಸರ್ಕಾರಿ ಶಾಲೆ ಮಕ್ಕಳು ಕಲಿಯಲು ಕೀಳರಿಮೆ ಪಡುವ ಅಗತ್ಯವಿಲ್ಲ. ಸರ್ಕಾರವೇ ಪ್ರತಿ ಎರಡು ಶನಿವಾರಕ್ಕೆ ಒಮ್ಮೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿವೆ ಎಂದರು.

ಸ್ಪಷ್ಟತೆ ನೀಡಿ: ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸರ್ಕಾರಿ ಶಾಲೆ ಅರ್ಹ ಅತಿಥಿ ಉಪನ್ಯಾಸರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ಕೃಪಾಂಕ ನೀಡಲು ಸರ್ಕಾರ ಮುಂದಾಗಬೇಕು ಎಂದರು. ಉಪಮುಖ್ಯಮಂತ್ರಿ  ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉತ್ತರಿಸುತ್ತಾ ಸರ್ಕಾರ ಈ ಬಗ್ಗೆ ಪರಿಶೀಲಿಸಲಿದೆ ಎಂದರು. ಉತ್ತರಕ್ಕೆ ಸಮಾಧಾನಪಡದ ಮರಿತಿಬ್ಬೇಗೌಡರು ಸ್ಪಷ್ಟತೆ ಬೇಕು ಎಂದರು. ಆಡಳಿತ ಪಕ್ಷದ ಸದಸ್ಯರಾದ ಆಯನೂರು ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ಬೆಂಬಲಿಸಿದರು. ಅವರ ವೇತನ ಹೆಚ್ಚಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಸದನದಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ಚರ್ಚಿಸಿದರು.

ಪ್ರತಿಭೆ ಆಧಾರದ ಮೇಲೆ ಆಯ್ಕೆ: ಪುಟ್ಟಣ್ಣ ಹಾಗೂ ಭೋಜೇಗೌಡ ಮಾತನಾಡಿ ಶಿಕ್ಷಕರ ಸಮಸ್ಯೆ ಬಿಚ್ಚಿಟ್ಟರು. ಉತ್ತರಿಸಿದ ಸಚಿವ ಡಾ.ಅಶ್ವತ್ಥ ನಾರಾಯಣ, ಶಿಕ್ಷಕರ ಸ್ಥಿತಿ ಬೇಸರ ತರಿಸುತ್ತಿದೆ. ಉದ್ಯೋಗ ಭದ್ರತೆ ಇಲ್ಲದೇ ಸಮಸ್ಯೆ ಹೆಚ್ಚಾಗಿದೆ. 12 ರಿಂದ 16 ಸಾವಿರ ಮಂದಿ ಇದ್ದಾರೆ. 1,240 ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಭೆ ಆಧಾರದ ಮೇಲೆ ಇದೇ ಅತಿಥಿ ಉಪನ್ಯಾಸಕರು ಆಯ್ಕೆಯಾಗಲಿದ್ದಾರೆ ಎಂದರು.

ಕರೆದಿರುವ ಹುದ್ದೆಗೂ, ಇರುವ ಅತಿಥಿ ಉಪನ್ಯಾಸಕರಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ಅದರಿಂದ ಅವಕಾಶ ಇರುವಲ್ಲಿ ಅವರಿಗೆ ಅವಕಾಶ ಮಾಡಿಕೊಡುತ್ತೇವೆ. ಮುಖ್ಯ ಮಂತ್ರಿಗಳ ಜೊತೆ  ವೇತನ ಹೆಚ್ಚಳ ಬಗ್ಗೆ ಸಮಾಲೋಚನೆ ಮಾಡುತ್ತೇನೆ ಎಂದರು. ಐವಾನ್ ಡಿಸೋಜ ಪ್ರಶ್ನೆಗೆ ಉತ್ತರಿಸುತ್ತಾ, ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ನೀಡಲು ಯತ್ನಿಸುತ್ತೇವೆ. ಪ್ರವಾಸ ಸಂಬಂಧ ಪ್ರವಾಸೋದ್ಯಮ ಇಲಾಖೆ ಜತೆ ಚರ್ಚಿಸುತ್ತೇವೆ. ಜ್ಯೋತಿ ಸಂಜೀವಿನಿ ಅತ್ಯಂತ ಕಷ್ಟ. ಅನುದಾನದ ಕೊರತೆ ಇದೆ. ಇದರಿಂದ ಜ್ಯೋತಿ ಸಂಜೀವಿನಿ ಹಾಗೂ ಮಕ್ಕಳಿಗೆ ಶೂ ಸಾಕ್ಸ್ ನೀಡುವುದು ಆರ್ಥಿಕ ಸ್ಥಿತಿಯಲ್ಲಿ ಕಷ್ಟಸಾಧ್ಯ. ಮುಂದೆ ನೋಡೋಣ ಎಂದು ಭರವಸೆ ಇತ್ತರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss