ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಮೈಲನಾಯ್ಕನಹೊಸಳ್ಳಿಯ ಸರ್ಕಾರಿ ಕರಾಬು ಹಳ್ಳದ ರಸ್ತೆಯ ತೆರವು ಕಾರ್ಯಾಚರಣೆ ಎರಡನೇ ದಿನ ಶನಿವಾರ ನಡೆದು ಸುಖಾಂತ್ಯ ಕಂಡಿತು. ಗ್ರಾಮದ ಸರ್ಕಾರಿ ಹಳ್ಳದ ಕರಾಬು ರಸ್ತೆಯನ್ನು ಸುಮಾರು ಎರಡು ಕಿಲೋಮೀಟರ್ವರೆಗೆಕೆಲ ಪಟ್ಟಭದ್ರರು ಸೇರಿ ಹಲವಾರು ಮಂದಿ ರೈತರು ಅತಿಕ್ರಮವಾಗಿ ವಶಪಡಿಸಿಕೊಂಡಿದ್ದರು.
ಅಲ್ಲದೆ ಪ್ರಭಾವಿಗಳು ಸರ್ಕಾರಿ ಹಳ್ಳದ ರಸ್ತೆಗೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದರಿಂದ ಹಲವಾರು ವರ್ಷಗಳಿಂದ ಸಾರ್ವಜನಿಕರ ದೂರು ದೂರಾಗಿಯೇ ಉಳಿದಿತ್ತು. ಆದರೆ ತಾಲ್ಲೂಕು ದಂಡಾಧಿಕಾರಿಯಾಗಿ ಬಂದ ನಾಗೇಶ್ರವರು ಗ್ರಾಮದ ಸರ್ಕಾರಿ ಹಳ್ಳದ ಸಂಪೂರ್ಣ ನಕಾಶೆ ರಸ್ತೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಸರ್ವೆ ಅಧಿಕಾರಿಗಳಿಂದ ಸರ್ವೆ ಮಾಡಿಸಿ, ಎರಡು ದಿನದ ಹಿಂದೆಯೇ ನಿರ್ದಾಕ್ಷಿಣ್ಯವಾಗಿ ಸರ್ಕಾರಿ ಹಳ್ಳದ ರಸ್ತೆಯ ತೆರವು ಕಾರ್ಯಚರಣೆ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಭಾವಿ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಂ.ಎಂ. ಆನಂದ್ರವರು ಕಾಂಪೌಂಡ್ ನಿರ್ಮಾಣ ಕೂಡ ಅತಿಕ್ರಮವಾಗಿದ್ದು, ಸ್ವಲ್ಪ ಅಡಚಣೆ ಹಾಗೂ ಕೆಲ ಮಂದಿ ರೈತರು ಪ್ರತಿರೋಧ ವ್ಯಕ್ತವಾದ ಹಿನ್ನೆಲೆ ಹಾಗೂ ರಾತ್ರಿಯಾಗಿದ್ದರಿಂದ ತೆರವು ಕಾರ್ಯವನ್ನು ಶನಿವಾರಕ್ಕೆ ಮುಂದೂಡಲಾಗಿತ್ತು. ಆದರೆ ಇಂದು ಕಾರ್ಯಪ್ರವೃತ್ತರಾದ ದಂಡಾಧಿಕಾರಿ ನಾಗೇಶ್, ತಾಲ್ಲೂಕು ಆಡಳಿತ, ಸರ್ವೆ ಅಧಿಕಾರಿಗಳು ಪೊಲೀಸ್ ವರ್ಗ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಜೆಸಿಬಿಯಿಂದ ಕಾಂಪೌಂಡ್ ತೆರವುಗೊಳಿಸುವ ಕಾರ್ಯ ಮುಂದುವರಿಯಿತು.