ಹಾಸನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎದುರಾದ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶ್ರವಣಬೆಳಗೊಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದ ನೆರೆ ಸಂದರ್ಭದಲ್ಲಿ ಹಾಗೂ ಕೊರೋನಾ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಸರ್ಕಾರದ ಕಾರ್ಯದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ್ಲಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಕಲ್ಯಾಣಕ್ಕೆ ಹಲವು ಯೋಜನೆ, ನೇಕಾರರ ಸಾಲ ಮನ್ನಾ, ಬಡವರಿಗೆ ಅಭ್ಯುದಯಕ್ಕಾಗಿ ಹಲವರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರಾಜ್ಯದ ಜನತೆ ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಗಳನ್ನು ಮೆಚ್ಚಿದ್ದಾರೆ ಎಂದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಕೋವಿಡ್ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಬೇರ್ಯಾವ ವಿಚಾರ ಸಿಕ್ಕಿಲ್ಲ ಹಾಗಾಗೀ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಸಂಪೂರ್ಣ ಮಾಹಿತಿ ನೀಡಿದ ಮೇಲೂ ಸುಖಾಸುಮ್ಮನೆ ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ಸಿಗರಿಗೆ ಬಿಜೆಪಿ ಬಗೆಗೆ ಮಾತನಾಡಲು ಯಾವುದೇ ವಿಚಾರ ಇಲ್ಲ. ಹಾಗಾಗೀ ಕೋವಿಡ್ ಪರಿಸ್ಥಿತಿಯಲ್ಲೂ ರಾಜಕೀಯ ವೈಷಮ್ಯ ಸಾಧಿಸಲು ಮುಂದಾಗಿರುವ ಕಾಂಗ್ರೆಸ್ಸಿಗರಿಗೆ ನಾಡಿನ ಜನತೆಯ ಬಗೆಗೆ ಚಿಂತೆ ಇಲ್ಲ ಎಂದ ಅವರು, ಏನಾದ್ರು ಚರ್ಚೆ ಇದ್ದರೆ ಸದನದಲ್ಲಿ ಬಂದು ಮಾತನಾಡಬೇಕು ಅದನ್ನು ಬಿಟ್ಟು ಚಿಲ್ಲರೆ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವವರಿಗೆ ಅವರ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬುದನ್ನು ಮರೆತಂತಿದೆ. ಹಾಲಿ ರಾಜ್ಯಾಧ್ಯಕ್ಷರು ಕೂಡ ತನಿಖೆ ಬೇಡ ಎಂದು ಅರ್ಜಿ ಹಾಕಿದ್ದಾರೆ. ಇದೆಲ್ಲವನ್ನು ಮರೆತಿರುವ ಕಾಂಗ್ರೆಸ್ ಬಿಜೆಪಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದ ಅವರು,ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದಿದ್ದೆ ಕಾಂಗ್ರೆಸ್, ಅದೊಂದು ಭ್ರಷ್ಟಾಚಾರದ ಪಕ್ಷ ಎಂದು ಲೇವಡಿ ಮಾಡಿದರು.
ಇದೇ ವೇಳೆ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ವಾಗ್ದಾಳಿ ನಡೆದಿದ ಅವರು, ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಏನಾಗಿದೆ ಬಹಿರಂಗ ಪಡಿಸಲಿ, ನಿಮ್ಮ ಅವಧಿಯಲ್ಲಿ ಖರೀದಿಸಿದ ವೆಂಟಿಲೇಟರ್ ಎಲ್ಲಿ ಹೋದವು ತೋರಿಸಿ ಎಂದು ಪ್ರಶ್ನಿಸಿದ ಅವರು, ಚಿಲ್ಲರೆ ರಾಜಕಾರಣ ಬಿಟ್ಟು ರಾಜ್ಯದ ಜನರ ಸಹಾಯಕ್ಕೆ ಬನ್ನಿ ಎಂದರು.
ನಿಗಮ ಮಂಡಳಿ ಸ್ಥಾನ ಬೇಡ ಅಂತಾ ಯಾವ ಶಾಸಕರೂ ರಿಜೆಕ್ಟ್ ಮಾಡಿಲ್ಲ, ಆದರೆ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲವೇ ಇಲ್ಲ ಏಕೆಂದರೆ ನಮ್ಮಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿಎಂ ಬದಲಾಗಲಿ ಎಂದು ರಾಜ್ಯಾಧ್ಯಕ್ಷನಾದ ನಾನಾಗಲಿ, ಇಲ್ಲವೇ ರಾಜ್ಯದ ಸಚಿವರಾಗಲಿ ಹೇಳಿಲ್ಲ ಎಂದರು.