Friday, August 19, 2022

Latest Posts

ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಚಿವ ಎಸ್.ಟಿ.ಸೋಮಶೇಖರ್

ಚಿತ್ರದುರ್ಗ: ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಗೆ ಚಿಂತನೆ  ನಡೆಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‌ಗಳ ಮೂಲಕ ಮಹಿಳಾ ಸ್ವಸಹಾಯ ಸಂಘದವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅದರಂತೆ ಆಶಾ ಕಾರ್ಯಕರ್ತೆಯರಿಗೂ ನೀಡಬಹುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತೀರ್ಮಾನಿಸಲಾಗುವುದು ಎಂದರು.
ಕೊರೋನಾ ವೈರಸ್ ಹಾವಳಿ ನಿಯಂತ್ರಿಸುವಲ್ಲಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಶ್ರಮಕ್ಕೆ ಮೆಚ್ಚಿ ಸರ್ಕಾರ ತಲಾ ೩ ಸಾವಿರ ರೂ.ನಂತೆ ಸಹಾಯಧನ ನೀಡುತ್ತಿದೆ. ರಾಜ್ಯದಲ್ಲಿ ೪೫ ಸಾವಿರ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿನ ಆಶಾ ಕಾರ್ಯಕರ್ತೆಯರಿಗೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಜನರಿಗೆ ಅಗತ್ಯ ಚಿಕಿತ್ಸೆ ನೀಡುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಅದರಂತೆ ಆಶಾ ಕಾರ್ಯಕರ್ತೆಯರು ಸಹ ಶ್ರಮವಹಿಸಿ ದುಡಿದಿದ್ದಾರೆ. ಅವರ ಸೇವೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಮಹಿಳಾ ಸಂಘಗಳ ಕಾರ್ಯ ಚಟುವಟಿಕೆಯಿಂದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಕಷ್ಟು ಹಣ ಜಮೆಯಾಗಿದೆ. ಅದರಂತೆ ಸಹಕಾರಿ ಬ್ಯಾಂಕ್‌ಗಳು ಆಶಾ ಕಾರ್ಯಕರ್ತೆಯರಿಗೆ ಸಾಲ ಸೌಲಭ್ಯ ನೀಡಿದಲ್ಲಿ ಅವರಿಗೆ ಅನುಕೂಲವಾಗುತ್ತದೆ. ಸಾಲದ ಹಣದಲ್ಲಿ ಏನಾದರೂ ಉಪಕಸುಬು ನಡೆಸುವ ಮೂಲಕ ಜೀವನದಲ್ಲಿ ಸ್ವಾವಲಂಭನೆ ಗಳಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಚಿವ ಸೋಮಶೇಖರ್ ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಶಾಸಕರಾದ ಪೂರ್ಣಿಮಾ, ಗೂಳೀಹಟ್ಟಿ ಡಿ.ಶೇಖರ್, ಟಿ.ರಘುಮೂರ್ತಿ, ಜಿ.ಪಂ. ಅಧ್ಯಕ್ಷೆ ಶಶಿಕಲಾ, ತಾ.ಪಂ. ಅಧ್ಯಕ್ಷ ಡಿ.ಎಂ.ಲಿಂಗರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್, ನಿರ್ದೇಶಕ ಗಿರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ತಲಾ ಇಬ್ಬರು ಆಶಾ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!