ಹೊಸದಿಲ್ಲಿ: ಸಹಕಾರಿ ಬ್ಯಾಂಕ್ ಗಳನ್ನು ಆರ್ ಬಿಐ ನ ಸುಪರ್ದಿಗೆ ತರಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ. ಜೂನ್ 26ರಂದು ಹೊರಡಿಸಲಾದ ಸುಗ್ರೀವಾಜ್ಞೆಯ ಬದಲಿಗೆ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020 ಅನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಪಿ.ಎಂ.ಸಿ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಈ ಮಸೂದೆಯು ಸಹಕಾರಿ ಬ್ಯಾಂಕ್ ಗಳನ್ನು ಬಲಪಡಿಸಲು, ಬಂಡವಾಳಕ್ಕೆ ಅವಕಾಶ, ಆಡಳಿತ ಸುಧಾರಣೆ ಮತ್ತು ಆರ್ ಬಿಐ ಮೂಲಕ ಸದೃಢ ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾತ್ರಿಪಡಿಸುವ ಮೂಲಕ ಸಹಕಾರಿ ಬ್ಯಾಂಕ್ ಗಳನ್ನು ಬಲಪಡಿಸುತ್ತದೆ. ರಾಜ್ಯಸಭೆಯಲ್ಲಿ ಮಸೂದೆ ಕುರಿತ ಸಂಕ್ಷಿಪ್ತ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಠೇವಣಿದಾರನ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲು ತಿದ್ದುಪಡಿಗಳನ್ನು ತರಲಾಗಿದೆ. ಈ ತಿದ್ದುಪಡಿಯು ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ತೊಡಗಿರುವ ಸಹಕಾರಿ ಸಂಘಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ತಿದ್ದುಪಡಿಗೆ ಸೆಪ್ಟೆಂಬರ್ 16ರಂದು ಲೋಕಸಭೆಯಿಂದ ಅನುಮೋದನೆ ಸಿಕ್ಕಿತ್ತು.