ಉಡುಪಿ: ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷರಾಗಿರುವ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸೇರಿದಂತೆ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಬೆಂಗಳೂರು ಡಾಲರ್ಸ್ ಕಾಲೊನಿ ನಿವಾಸಿಯಾಗಿರುವ ಉದ್ಯಮಿ, ಆರೋಪಿಯ ಸಹೋದರ ಕಿಶೋರ್ ಹೆಗ್ಡೆ ಎಂಬವರು ದೂರು ನೀಡಿದ್ದಾರೆ. ಅದರಂತೆ ಕಿಶನ್ ಹೆಗ್ಡೆ, ಹಿಲಿಯಾಣ ಗ್ರಾಮದ ಎಚ್. ಕೃಷ್ಣಯ್ಯ ಶೆಟ್ಟಿ ಮತ್ತು ಶಿರಿಯಾರ ಗ್ರಾಮದ ಚಂದ್ರ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಿಶೋರ್ ಹೆಗ್ಡೆ ಅವರ ತಂದೆ ತಮ್ಮ ಪತ್ನಿಗೆ 2001ರ ಡಿಸೆಂಬರ್ 1ರಂದು ಬೆಂಗಳೂರಿನಲ್ಲಿರುವ ಮನೆ ಹಾಗೂ ಮನೆಗೆ ಸಂಬಂಧಿಸಿದ ಆಸ್ತಿಯನ್ನು ವೀಲುನಾಮೆ ಮುಖಾಂತರ ಬರೆದುಕೊಟ್ಟಿದ್ದರು. ನಂತರ ಆ ಮನೆ ಹಾಗೂ ಮನೆಗೆ ಸಂಬಂಧಿಸಿದ ಆಸ್ತಿಯನ್ನು ಕಿಶೋರ್ ಹೆಗ್ಡೆ ಅವರ ತಾಯಿಯು ಸ್ವತಃ 2004ರ ಮೇ 7ರಂದು ಆ ವೀಲನ್ನು ಬೆಂಗಳೂರು ಗಾಂಧಿನಗದ ಉಪ-ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಿದ್ದರು. ಬಳಿಕ 2005ರ ಏಪ್ರಿಲ್ 12ರಂದು ಕಿಶೋರ್ ಹೆಗ್ಡೆ ಅವರಿಗೆ ನೋಂದಾಯಿತ ಉಡುಗೊರೆ ಪತ್ರ (ಗಿಫ್ಟ್ ಡೀಡ್)ವನ್ನು ಗಾಂಧಿನಗರ ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿ ನೀಡಿದ್ದಾರೆ.
ಕಿಶೋರ್ ಹೆಗ್ಡೆ ಅವರ ತಂದೆ 2002ರ ನವೆಂಬರ್ 25ರಂದು ಮೃತಪಟ್ಟಿದ್ದಾರೆ. ತಂದೆಯ ಬೆಂಗಳೂರಿನಲ್ಲಿರುವ ಮನೆ ಹಾಗೂ ಮನೆಗೆ ಸಂಬಂಧಿಸಿದ ಆಸ್ತಿಗೆ ಆರೋಪಿತರಾದ ಎಚ್. ಕೃಷ್ಣಯ್ಯ ಶೆಟ್ಟಿ ಮತ್ತು ಚಂದ್ರ ಶೆಟ್ಟಿ ಸೇರಿಕೊಂಡು 2002ರ ಜೂನ್ 14ರಂದು ಆರೋಪಿ ಕಿಶನ್ ಹೆಗ್ಡೆಯ ತಂದೆ ಬರಕೊಟ್ಟಂತೆ ನಕಲಿ ವೀಲು ನಾಮೆಯನ್ನು ತಯಾರಿಸಿ, ವೀಲುನಾಮೆಗೆ ತಂದೆಯ ನಕಲಿ ಸಹಿಯನ್ನು ಮಾಡಿದ್ದಾರೆ. ಅಲ್ಲದೇ ಅದು ನೈಜವಾಗಿರುವುದಾಗಿ ಹೇಳಿ ಅದನ್ನು 2015ರ ಡಿಸೆಂಬರ್ 31ರಂದು ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಸಿವಿಲ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ವಂಚನೆ ಹಾಗೂ ಮೋಸ ಮಾಡಲಾಗಿದೆ ಎಂದು ಕಿಶೋರ್ ಹೆಗ್ಡೆ ದೂರಿನಲ್ಲಿ ತಿಳಿಸಿದ್ದಾರೆ.