Wednesday, August 10, 2022

Latest Posts

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು.
ಜಿಲ್ಲೆಯ ಕುಂದಾಪುರ ಭಾಗದಲ್ಲಿ ಸೋಮವಾರ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಕಾರ್ಕಳ ಮತ್ತು ಉಡುಪಿ ತಾಲೂಕಿನಲ್ಲಿಯೂ ಸಾಧಾರಣ ಮಳೆ ಸುರಿದಿದೆ. ಮಂಗಳವಾರ ಸಂಜೆ ನಗರದಲ್ಲಿ ಗಾಳಿ ಮಳೆಯಾಗಿದ್ದರೆ, ರಾತ್ರಿಯೂ ಉಡುಪಿ ನಗರದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಬಿದ್ದಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 48 ಮಿ.ಮೀ. ಮಳೆ ಬಿದ್ದಿದೆ. ಉಡುಪಿ ತಾಲೂಕಿನಲ್ಲಿ 33.6 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 72 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 31.5 ಮಿ.ಮೀ. ಸುರಿದಿದೆ. ಈ ಅವಧಿಯಲ್ಲಿ ಜಿಲ್ಲೆಯ ಬಳ್ಕೂರಿನಲ್ಲಿ ಅತೀ ಹೆಚ್ಚು 111 ಮಿ.ಮೀ. ಮಳೆಯಾಗಿದೆ. ಕಾಲ್ತೋಡು ಗ್ರಾಮದಲ್ಲಿ 101 ಮಿ.ಮೀ. ಮಳೆ ಸುರಿದಿದೆ.
ನಾಳೆ ಮಳೆ ಎಚ್ಚರಿಕೆ ಇಲ್ಲ
ಮೂರು ದಿನಗಳ ಕಾಲ ಭಾರೀ ಮಳೆಯ ನಿರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಮಂಗಳವಾರ ಬೆಳಗ್ಗೆ 8.30ಕ್ಕೆ ರೆಡ್ ಅಲರ್ಟ್ ಮುಕ್ತಾಯವಾಗಿದ್ದು, ನಂತರ ಆರೆಂಜ್ ಅಲರ್ಟ್ ನೀಡಲಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನ 1ಗಂಟೆಗೆ ಪ್ರಕಟಿಸಿದ ವರದಿಯಲ್ಲಿ ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿತ್ತು. ನಾಳೆ ಬೆಳಗ್ಗೆ 8.30ರವರೆಗೆ ಈ ಎಚ್ಚರಿಕೆ ಇರಲಿದ್ದು, ನಂತರ ಮಳೆಯ ಯಾವುದೇ ಎಚ್ಚರಿಕೆ ಇಲ್ಲ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವರದಿ ಪ್ರಕಾರ ಪ್ರತ್ಯೇಕ ಸ್ಥಳಗಳಲ್ಲಿ ಸಾಮಾನ್ಯ ಮಳೆಯನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss