Wednesday, August 10, 2022

Latest Posts

ಸಾಂಪ್ರದಾಯಿಕ ಬೆಳೆ ಕಬ್ಬಿನ ಬೆಳೆಯೊಂದಿಗೆ ಪರ್ಯಾಯ ಬೆಳೆ: ಮುಧೋಳ ಮಂಟೂರ ಗ್ರಾಮದ ಸಚಿನ ಸಾಧನೆ!

ಮುಧೋಳ: ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರೊಂದಿಗೆ ಅಲ್ಪಾವಧಿ ಪರ್ಯಾಯ ಬೆಳೆಗಳನ್ನು ಬೆಳೆಯುವುದರಿಂದ ಕೃಷಿಯನ್ನು ಒಂದು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಮಿಶ್ರಬೆಳೆ ಬೆಳೆಯುವುದರಿಂದ ಒಂದಲ್ಲಾ ಒಂದು ಬೆಳೆ ಕೈ ಹಿಡಿದು ರೈತರು ಲಾಭದತ್ತ ಮುಖ ಮಾಡಬಹುದು. ಇದಕ್ಕೆ ಉತ್ತಮ ನಿದರ್ಶನರಾದವರು ಮುಧೋಳ ತಾಲೂಕಿನ ಮಂಟೂರು ಗ್ರಾಮದ ಸಚಿನ ಮೂಲಿಮನಿಯವರು.
ಹೊಸ ತಂತ್ರಜ್ಞಾನಳಲ್ಲೊಂದಾದ ಹನಿ ನೀರಾವರಿಯಲ್ಲಿ ಕಬ್ಬು, ಬಾಳೆ, ಈರುಳ್ಳಿ, ಚಂಡೂ ಹೂವುಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಹೊದಿಕೆಗಳಂತಹ ವ್ಶೆಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕಲ್ಲಂಗಡಿಯನ್ನು ಬೆಳೆಯುತ್ತಿದ್ದಾರೆ. ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ 13 ಎಕರೆ ಕಬ್ಬಿನ ಜೊತೆಗೆ ಈರುಳ್ಳಿ, ಮಕ್ಕೆಜೋಳ, ಚಂಡೂ ಹೂವು ಹೀಗೆ ಹಲವಾರು ಮಿಶ್ರಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ಇವರು ಪ್ರಗತಿಪರ ರೈತರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಇವರಿಗೆ ಮೊದಲಿನಿಂದಲೂ ಕೃಷಿಯಲ್ಲಿ ಒಲವು ಇತ್ತು. ತಾವು ಪ್ರಾಯೋಗಿಕ ಕೃಷಿಕರಾಗಬೇಕೆಂಬ ಅಭಿಲಾಷೆಯಿಚಿದ ಇವರು ಬಾಗಲಕೋಟೆ ವಿಶ್ವವಿದ್ಯಾಲಯದ ತೋಟಗಾರಿಕೆ ಮಹಾವಿದ್ಯಾಲಯ, ಶಿರಸಿಯಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆದುಕೊಂಡರು. ನಂತರ ಅವರ ಆಸಕ್ತಿಯ ಕ್ಷೇತ್ರವಾದ ಕೃಷಿಯಲ್ಲಿ ಮಿಶ್ರಬೆಳೆ ಬೆಳೆಯುವುದರತ್ತ ಮುಖ ಮಾಡಿದರು.
ಪದವಿ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಇವರು ತಮ್ಮ ಕೃಷಿ ಭೂಮಿಯಲ್ಲಿ ಮೊದಲ ಬಾರಿಗೆ ಕಲ್ಲಂಗಡಿ ಬೆಳೆಯನ್ನು ಬೆಳೆದರು. ಅವರ ಆ ಪ್ರದೇಶದಲ್ಲಿ ಕರಿಕಲ್ಲಂಗಡಿ ಬೆಳೆಯನ್ನು ಬೆಳೆಯುವುದು ತುಂಬಾ ವಿರಳ. ಆದರೆ ಇವರು ಮೊಟ್ಟಮೊದಲ ಬಾರಿಗೆ ವ್ಶೆಜ್ಞಾನಿಕ ವಿಧಾನವಾದ ಏರುವ್ಮಡಿಯ ಮೇಲೆ ಹನಿನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆಯನ್ನು ಉಪಯೋಗಿಸಿ ಈ ಬೆಳೆಯನ್ನು ಮತ್ತು ಬೆಳೆಯುವ ವಿಧಾನವನ್ನು ಪ್ರಥಮವಾಗಿ ಪರಿಚಯಿಸಿದರು. ಇದರ ನಂತರ ತಾವು ಬೆಳೆದ ಬೆಳೆಯ ಕುರಿತು ಇತರ ರೈತರಿಗೆ ಪರಿಚಯಿಸುತ್ತಾ ಅವರೂ ಬೆಳೆಯುವಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ.  ಇದೇ ರೀತಿಯಾಗಿ ಹಳದಿ ಚಂಡೂ ಹೂವು ಬೆಳೆಯನ್ನೂ ಕೂಡ ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಬೆಳೆದವರಲ್ಲಿ  ಮೊದಲಿಗರಾಗಿದ್ದಾರೆ. ತಮ್ಮ ಭಾಗದ ಕೃಷಿ ಅಧಿಕಾರಿಗಳ ಸಲಹೆಗಳೊಂದಿಗೆ ೪೫ ದಿನಗಳಲ್ಲಿ ಕೊಯ್ಲು ಮಾಡಬಹುದಾತಂತ ಚಂಡೂ ಹೂವನ್ನು ಬೆಳೆದು ಮಾರಾಟಕ್ಕಾಗಿ ಮುಂಬೈ ಮಾರುಕಟ್ಟೆಗೆ ಕಳುಹಿಸಿದರು.
ಸಾಮಾನ್ಯವಾಗಿ ಕಬ್ಬನ್ನು ಒಂದು ಸಾಲಿನಿಂದ ಸಾಲಿಗೆ 4 ಅಡಿ ಅಂತರದಲ್ಲಿ ಬೆಳೆಯುತ್ತಿದ್ದರು. ಆದರೆ ಇವರು ಕಳೆದ ವರ್ಷ 8 ಅಡಿ ಅಂತರದ ಸಾಲುಗಳ ನಡುವೆ ಈರುಳ್ಳಿ ಬೆಳೆಯನ್ನು ಬೆಳೆದು ಉತ್ತಮ ಇಳುವರಿಯನ್ನು ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಇಂತಹ ಇವರ ಕೃಷಿ ಚಟುವಟಿಕೆಗಳು ಪ್ರಾಯೋಗಿಕ ಕೃಷಿ ಚಿಂತನೆಗೆ ಸಾಕ್ಷಿಯಾಗಿವೆ.
ಇವರು ಸಿಂಜೆಂಟಾ ಕಂಪನಿಯ ಶುಗರ್ ಕ್ವೀನ್ ಹಾಗೂ ಕಳಶ್ ಕಂಪನಿಯ ಮೆಲೋಡಿ ಕಲ್ಲಂಗಡಿ  ತಳಿಯನ್ನು ಬೆಳೆದಿದ್ದಾರೆ. ಇದರ ಬೀಜಗಳನ್ನು ಬಾಗಲಕೋಟೆಯಿಚಿದ ಅಥವಾ ಹತ್ತಿರದ ಮುಧೋಳದಿಂದ ಹಾಗೂ ನರ್ಸರಿಗಳಿಂದ ಸಸಿಗಳನ್ನು ತರಿಸುತ್ತಾರೆ. ಇದು 2 ತಿಂಗಳ ಬೆಳೆ. 1 ಎಕರೆಗೆ ಪ್ಲಾಸ್ಟಿಕ್ ಹೊದಿಕೆ, ಹನಿನೀರಾವರಿ, ನೀರಿನಲ್ಲಿ ಕರಗುವ ರಸಗೊಬ್ಬರ, ಕೀಟನಾಶಕಗಳೆಲ್ಲಾ ಸೇರಿ 60 ರಿಂದ 70 ಸಾವಿರಷ್ಟು ಖರ್ಚು ತಗುಲುತ್ತದೆ. 1 ಎಕರೆಗೆ 25 ರಿಂದ 30 ಟನ್‌ನಷ್ಟು ಇಳುವರಿಯನ್ನು ತೆಗೆಯುತ್ತಾರೆ. ಪ್ರತಿ ಕೆ.ಜಿ.ಗೆ ಸರಾಸರಿ 7 ರಿಂದ 8 ರೂಪಾಯಿಗಳು ಸಿಕ್ಕರೂ ಖರ್ಚುಗಳನ್ನು ಬಿಟ್ಟು ನಿವ್ವಳ ಲಾಭ 1 ಎಕರೆಗೆ 1 ಲಕ್ಷಕ್ಕಿಂತ ಅಧಿಕ ಲಾಭವನ್ನು ಗಳಿಸಬಹುದು ಎಂದು ಹೇಳುತ್ತಾರೆ. ಇವರು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ  ಅಕ್ಟೋಬರ್ ತಿಂಗಳಿಂದ ಏಪ್ರಿಲ್ ತಿಂಗಳವರೆಗೂ ಕಲ್ಲಂಗಡಿಯನ್ನು ಬೆಳೆಯುತ್ತಾರೆ.
ಬೇಸಿಗೆಯ ದಿನಗಳಲ್ಲಿ (ಫೆಬ್ರವರಿ-ಏಪ್ರಿಲ್) ಕಲ್ಲಂಗಡಿಯನ್ನು ಬೆಳೆಯುತ್ತಿದ್ದರೆ ಅದರ ಬೀಜಗಳನ್ನು ಉಪಯೋಗಿಸುತ್ತಾರೆ. ಚಳಿಗಾಲದಲ್ಲಿ (ಸಪ್ಟೆಂಬರ್-ಡಿಸೆಂಬರ್) ಬೆಳೆಯುತ್ತಿದ್ದರೆ ತಾಪಮಾನ ಕಡಿಮೆ ಇರುವದರಿಂದ ಬೀಜಗಳು ಸರಿಯಾಗಿ ಮೊಳಕೆ ಬಾರದಿರುವದರಿಂದ ಈ ಸಮಯದಲ್ಲಿ ನರ್ಸರಿಯಿಂದ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ. ಈ ಬೆಳೆಯನ್ನು ಬೆಳೆಯುವ ಮೊದಲು ೦೬ ಅಡಿ ಅಂತರದಲ್ಲಿ ಏರುಮಡಿ ಮಾಡಿ ಅದಕ್ಕೆ ಎರೆಹುಳಗೊಬ್ಬರ, ಬೇವಿನಹಿಂಡಿ, ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಅಗತ್ಯವಿರುವಷ್ಟು ಸೇರಿಸುತ್ತಾರೆ. ನಂತರ ಏರುಮಡಿಯ ಮೇಲೆ ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್)ಯನ್ನು ಹಾಕುತ್ತಾರೆ. ಇವುಗಳ ಮೇಲೆ ೦೨ ಅಡಿ ಜಿಗ್‌ಜಾಗ್ ಅಂತರದಲ್ಲಿ ಸಸಿ/ಬೀಜವನ್ನು ನೆಡುತ್ತಾರೆ. ೧ ಎಕರೆಗೆ ಸುಮಾರು ೬೫೦೦ರಿಂದ ೭೦೦೦ ಸಸಿಗಳನ್ನು ನೆಡಬಹುದು ಎಂದು ಹೇಳುತ್ತಾರೆ. ಸಸಿಗಳನ್ನು ನೆಟ್ಟ ದಿನ ಅಥವಾ ಮರುದಿನ ಡ್ರೆಂಚಿಂಗ್ (ತೇವ) ಮಾಡುತ್ತಾರೆ. ಡ್ರೆಂಚಿಂಗ್‌ಗೆ ಶಿಲೀಂದ್ರನಾಶಕ, ಬ್ಯಾಕ್ಟೀರಿಯಾನಾಶಕ ಮತ್ತು ಹ್ಯೂಮಿಕ್ ಆಮ್ಲವನ್ನು ಉಪಯೋಗಿಸುತ್ತಾರೆ. ನಂತರ ೪ರಿಂದ ೫ ದಿನಗಳನ್ನು ಬಿಟ್ಟು ಇನ್ರ್ನೆಂದು ಬಾರಿ ಡ್ರೆಂಚಿಂಗ್ (ತೇವ) ಮಾಡುತ್ತಾರೆ. ಈ ಬೆಳೆಗೆ ಕೀಟಗಳ ಕಾಟ ತುಂಬಾ ಇರುವದರಿಂದ ಬೇಸಿಗೆ ಕಾಲದಲ್ಲಿ ಕಲ್ಲಂಗಡಿಯನ್ನು ಬೆಳೆದರೆ ೨ ತಿಂಗಳಲ್ಲಿ ೨ರಿಂದ ೩ ಸಲ ಹಾಗೂ ಚಳಿ ಅಥವಾ ಮಳೆಗಾಲದಲ್ಲಿ ಬೆಳೆದರೆ ೭ರಿಂದ ೮ ಸಲ ಶಿಪಾರಿತ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಸಸಿಗಳನ್ನು ನೆಟ್ಟು ೧೫ ದಿನಗಳಾದ ನಂತರ ನೀರಲ್ಲಿ ಕರಗುವ ರಸಗೊಬ್ಬರಗಳನ್ನು ಕೊಡುತ್ತಾರೆ. ಅದರಲ್ಲಿ ೬ ಗ್ರೇಡ್‌ಗಳ ನೀರಲ್ಲಿ ಕರಗುವ ರಸಗೊಬ್ಬರಗಳನ್ನು ಉಪಯೋಗಿಸುತ್ತಾರೆ. ಬೆಳೆಯ ಬೆಳವಣಿಗೆಯ ಅನುಗುಣವಾಗಿ ಬೇರೆ ಬೇರೆ ರೀತಿಯ ಗ್ರೇಡ್‌ಗಳ ನೀರಲ್ಲಿ ಕರಗುವ ರಸಗೊಬ್ಬರಗಳನ್ನು ಕೊಡುತ್ತಾರೆ. ಬೆಳೆದ ಕಲ್ಲಂಗಡಿಗಳನ್ನು ಸ್ಥಳೀಯ ವ್ಯಾಪಾರಿಗಳ ಮೂಲಕ ಮಂಗಳೂರು, ಗೋವಾ, ಮುಂಬೈ ಮತ್ತು ಕೇರಳದಂತಹ ಮುಂತಾದ ಮಾರುಕಟ್ಟೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳುತ್ತಾರೆ. ಕೊಯ್ಲಾದ ಕಲ್ಲಂಗಡಿ ಬೆಳೆಯನ್ನು ಅಲ್ಲಿಯ ಸ್ಥಳೀಯ ವ್ಯಾಪಾರಿಗಳು ಅವರ ಕೃಷಿ ಭೂಮಿಗೆ ಬಂದು ಖರೀದಿಸಿಕೊಂಡು ಹೋಗುತ್ತಾರಂತೆ.
ಇವರ ಚಂಡೂ ಹೂವಿನ ಕೃಷಿಯ ಬಗ್ಗೆ ತಿಳಿದುಕೊಳ್ಳೋಣ. 
ಚಂಡೂ ಹೂವು ೪ರಿಂದ ೫ ತಿಂಗಳ ಬೆಳೆಯಾಗಿದ್ದು, ಎರಡು ತಿಂಗಳಿಗೆ ಕೊಯ್ಲು ಪ್ರಾರಂಭವಾಗುತ್ತದೆ. ಇವರು ಪೂರ್ಣ ಸಾವಯವ ರೀತಿಯಲ್ಲಿ ಹಾಗೂ ಶಿಪಾರಿತ ರಾಸಾಚಿiನಿಕ ಗೊಬ್ಬರಗಳನ್ನು ಉಪಯೋಗಿಸಿಕೊಂಡು ಎರಡೂ ರೀತಿಯಲ್ಲಿ ಚಂಡೂ ಹೂವಿನ ಕೃಷಿಯನ್ನು ಮಾಡುತ್ತಿದ್ದಾರೆ. ತುಮಕೂರಿನ ಕಂಪನಿ (ಎ.ವ್ಹಿ.ಟಿ. ಫೈನ್)ಯವರಿಂದ ಒಪ್ಪಂದದ ಕೃಷಿಯನ್ನು ಮಾಡಿಕೊಂಡು ಸಾವಯವದಲ್ಲಿ ಚಂಡೂ ಹೂವುಗಳನ್ನು ಬೆಳೆಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಬೀಜಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಜೈವಿಕ ಕೀಟನಾಶಕ, ಗೊಬ್ಬರಗಳನ್ನು ಅದೇ ಕಂಪನಿಯು ಪೂರೈಸುತ್ತದೆ.
ಇವರು ಬೀಜಗಳನ್ನು ಬಿತ್ತುವಾಗ ಭೂಮಿಯನ್ನು ಉಳುಮೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಎರೆಹುಳಗೊಬ್ಬರವನ್ನು ಹಾಕುತ್ತಾರೆ. ಹನಿ ನೀರಾವರಿ  ಹಾಗೂ ಪ್ರವಾಹ ನೀರಾವರಿ ಮೂಲಕ ನೀರನ್ನು ಕೊಡುತ್ತಾರೆ. ಮತ್ತೆ ಹೂವು ಬಿಡುವ ಪೂರ್ವದಲ್ಲಿ ಬೋರ್ಡೆಕ್ಸ್ (ತಾಮ್ರ ಸಲ್ಪೇಟ್ ಹಾಗೂ ಸುಣ್ಣದ ಮಿಶ್ರಣ),ಬೇವಿನ ಎಣ್ಣೆಗಳ ಮಿಶ್ರಣವನ್ನು ಗಿಡಗಳಿಗೆ ಸಿಂಪಡಿಸುತ್ತಾರೆ. ಬೋರ್ಡೆಕ್ಸ್  ಮಿಶ್ರಣವನ್ನು ಶೀಲೀಂಧ್ರನಾಶಕವಾಗಿ ಬಳಸಲಾಗುತ್ತದೆ.ಇವರು ದಶಪರ್ಣಿ ಸಾವಯವ ಕೀಟನಾಶಕವನ್ನು ತಯಾರಿಸಿಕೊಂಡು ಕೂಡ ಗಿಡಗಳಿಗೆ ಸಿಂಪಡಿಸುತ್ತಾರೆ.ಸಾವಯವ ಕೀಟನಾಶಕಗಳಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ ಗಿಡಗಳಲ್ಲಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹೂವಾದ ಮೇಲೆ ಕೋಯ್ಲಿನ ಪೂರ್ವದಲ್ಲಿ ಎಲ್ಲಾದರೂ ಕೀಟಗಳ ಕಾಟ ಅಥವಾ ರೋಗದ ಬಾಧೆ ಇದ್ದರೆ ಗಿಡಗಳಿಗೆ ಸಾವಯವ/ಜೈವಿಕ ಕೀಟನಾಶಕವನ್ನು ಸಿಂಪಡಿಸುತ್ತಾರೆ. ಕೊಯ್ಲಾದ ಹೂವುಗಳನ್ನು ಪ್ರತಿ ಕೆ.ಜಿ.ಗೆ ೧೦ ರೂ.ನಂತೆ ಅದೇ ಕಂಪನಿಯವರು ಕೊಂಡುಕೊಳ್ಳುತ್ತಾರೆ.
ಇದು ಒಂದು ರೀತಿಯಾದರೆ, ರಾಸಾಯನಿಕಗಳನ್ನು ಬಳಸಿ ಚಂಡೂ ಹೂವುಗಳನ್ನು ಬೆಳೆಯುವ ಮತ್ತೊಂದು ವಿಧಾನದಲ್ಲಿ ನರ್ಸರಿಗಳಿಂದ ಸಸಿಗಳನ್ನು ತಂದು ನಾಟಿ ಮಾಡಿ ರಾಸಾಯನಿಕ ರಸಗೊಬ್ಬರಗಳನ್ನು ಬಳಸಿ ಬೆಳೆಸಲಾಗುತ್ತದೆ. ಕೊಯ್ಲಾದ ಹೂವನ್ನು ಮುಂಬೈ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಅಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು ಪ್ರತಿ ಕೆ.ಜಿ.ಗೆ ೩೦ರಿಂದ ೧೦೦ ರೂ.ಗಳಂತೆ ಮಾರಾಟವಾಗುತ್ತದೆ. ಇದು ಪ್ರತಿ ಎಕರೆಗೆ ೮ರಿಂದ ೧೦ ಟನ್‌ನಷ್ಟು ಇಳುವರಿಯನ್ನು ಪಡೆಯುತ್ತಾರೆ.
ಇವರು ಈರುಳ್ಳಿಯನ್ನು ಮುಂಗಾರು ಬೆಳೆಯಾಗಿ ಜೂನ್‌ನಲ್ಲಿ ಬೆಳೆಯುತ್ತಾರೆ. ಹಿಂಗಾರಿ ಬೆಳೆಯಾಗಿ ನವಂಬರ್ ತಿಂಗಳಲ್ಲಿ ಬೀಜಗಳನ್ನು ಸಸಿಮಡಿಗೆಗಳಲ್ಲಿ ಹಾಕಿ ಸಸಿಗಳನ್ನು ತಯಾರಿಸಿಕೊಳ್ಳುತ್ತಾರೆ. ಹೀಗೆ ತಯಾರಾದ ೪೫ ದಿನದ ಸಸಿಗಳನ್ನು ತಿರುಗುಮಡಿ ಅಥವಾ ಏರುವ್ಮಡಿಗಳಲ್ಲಿ ನಾಟಿ ಮಾಡುತ್ತಾರೆ. ಇವರು ಪುನಾ ಪುರಸಂಗಿ ತಳಿಯ ಬೀಜಗಳನ್ನು ಹಿಂಗಾರು ಬೆಳೆಗೆ ಉಪಯೋಗಿಸುತ್ತಾರೆ. ಸಸಿಗಳನ್ನು ನೆಟ್ಟು ೦೩ ತಿಂಗಳುಗಳಲ್ಲಿ ಈರುಳ್ಳಿಯನ್ನು ಕೊಯ್ಲು ಮಾಡುತ್ತಾರೆ. ಹಿಂಗಾರು ಬೆಳೆಯಾಗಿ ಬೆಳೆದ ಈರುಳ್ಳಿಯನ್ನು ಸುಮಾರು ೪ರಿಂದ ೫ ತಿಂಗಳುಗಳವರೆಗೆ ಶೇಖರಣೆ ಮಾಡಿಟ್ಟು, ಬೆಲೆ ಜಾಸ್ತಿಯಾದಾಗ ೫೦ ಕೆ.ಜಿ. ಚೀಲಗಳಲ್ಲಿ ತುಂಬಿ ಬೆಳಗಾವಿ, ಬಾಗಲಕೋಟೆ ಮತ್ತು ಸೊಲ್ಲಾಪುರಗಳಿಗೆ ಮಾರಾಟಕ್ಕಾಗಿ ಕಳುಹಿಸುತ್ತಾರೆ. ಪ್ರತಿ ಎಕರೆಗೆ ಸುಮಾರು ೨೦೦ರಿಂದ ೨೫೦ ಚೀಲಗಳಷ್ಟು ಈರುಳ್ಳಿಯನ್ನು ಇಳುವರಿಯಾಗಿ ಪಡೆಯುತ್ತಾರೆ.
ಇವರ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿನ ಬೆಳೆಯನ್ನು ಇವರು ಅಕ್ಟೋಬರ್‌ದಿಂದ ಮಾರ್ಚ ತಿಂಗಳುಗಳವರೆಗೂ ನಾಟಿ ಮಾಡಲಾಗುತ್ತದೆ. ಇವರು ವಿವಿಧ ರೀತಿಯ ನಾಟಿ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಉದಾಹರಣೆಗೆ ೩.೫ ಅಡಿ, ೪ ಅಡಿ, ೫ ಅಡಿ, ೩*೬ ಪಟ್ಟಾಪದ್ಧತಿ, ೪*೮ ಪಟ್ಟಾಪದ್ಧತಿ ಅಂತರದ ಸಾಲುಗಳಲ್ಲಿ ಕಬ್ಬನ್ನು ನಾಟಿ ಮಾಡುತ್ತಿದ್ದಾರೆ. ಅದಲ್ಲದೆ ಒಂದು ಕಣ್ಣಿನ ಬೀಜ, ಎರಡು ಕಣ್ಣಿನ ಬೀಜ ಮತ್ತು ಒಂದು ಕಣ್ಣಿನ ಸಸಿಯನ್ನು ನಾಟಿ ಮಾಡಿರುತ್ತಾರೆ. ಹೊಸ ಹೊಸ ತಳಿಗಳಾದ ಛಿo೮೬೦೩೨, Sಓಏ೦೨೬೫, Sಓಏ೦೯೨೨೭, Pi೧೧೧೦ ,ಗಿsi೮೦೦೫ ನಂತಹ ವಿವಿಧ ರೀತಿಯ ತಳಿಗಳನ್ನು ಬೆಳೆಯುತ್ತಿದ್ದಾರೆ. ಭೂಮಿಯನ್ನು ಸಿದ್ಧಗೊಳಿಸಿ ಸಾಲುಗಳನ್ನು ಕೊರೆದು ಅವುಗಳಲ್ಲಿ ಜೈವಿಕ ಗೊಬ್ಬರವಾದ ಎರೆಹುಳು ಗೊಬ್ಬರದ ಜೊತೆಗೆ ರಸಗೊಬ್ಬರಗಳನ್ನು ಹಾಕಿ ನಾಟಿ ಮಾಡುತ್ತಾರೆ. ನಂತರ ಒಂದೂವರೆ ತಿಂಗಳಾದ ಮೇಲೆ ಡ್ರೆಂಚಿಂಗ್ ಮತ್ತು ಎರಡು ತಿಂಗಳಿಗೆ ಸಿಂಪಡಣೆ ಕೊಡುತ್ತಾರೆ. ನಂತರ ಅದಕ್ಕೆ ೪ರಿಂದ ೫ ಬಾರಿ ರಸಗೊಬ್ಬರಗಳನ್ನು ನೀಡುತ್ತಾರೆ. ತದಾದನಂತರ ೧೨ರಿಂದ ೧೪ ತಿಂಗಳುಗಳಲ್ಲಿ ಕಬ್ಬನ್ನು ಕಟಾವು ಮಾಡಿ ಎಕರೆಗೆ ಸರಾಸರಿ ೭೫ರಿಂದ ೮೫ ಟನ್‌ಗಳ ಇಳುವರಿಯನ್ನು ಪಡೆದಿರುತ್ತಾರೆ. ಕಟಾವು ಮಾಡಿದ ಕಬ್ಬನ್ನು ಸಕ್ಕರೆ ಕಾಖಾನೆಗಳಿಗೆ ಕಳುಹಿಸಲಾಗುತ್ತದೆ. ಆ ವರ್ಷದ ಬೆಳೆಯ  ಬೆಲೆಯನ್ನು  ಮೊದಲೆ ನಿಗಧಿಪಡಿಸಲಾಗಿರುತ್ತದೆ ಎಂದು ಇವರು ಹೇಳುತ್ತಾರೆ.
ಇವರು  ಜೂನ್ ಮತ್ತು ಡಿಸೆಂಬರ್ ನಲ್ಲಿ ೨ ಸಲ ಮೆಕ್ಕೆಜೋಳವನ್ನು ಬೆಳೆಯುತ್ತಿದ್ದಾರೆ. ಮೊದಲಿಗೆ ಎರಡು ಅಡಿ ಅಂತರದಲ್ಲಿ ಸಾಲುಗಳನ್ನು ಕೊರೆದು ಬೀಜದಿಂದ ಬೀಜಕ್ಕೆ ಒಂದು ಅಡಿ ಅಂತರದಲ್ಲಿ ಬಿತ್ತನೆ ಮಾಡುತ್ತಾರೆ. ಮೂರು ಸಲ ರಸಗೊಬ್ಬರಗಳನ್ನು ನೀಡಿ ಪ್ರತಿ ಎಕರೆಗೆ ೩೦ರಿಂದ ೩೫ ಕ್ವಿಂಟಾಲ್ ಇಳುವರಿಯನ್ನು ಪಡೆದಿರುತ್ತಾರೆ.
ಇವರು ತಮ್ಮ ಕೃಷಿ ಭೂಮಿಚಿiಲ್ಲಿ ತಗ್ಗಾದ ಪ್ರದೇಶದಲ್ಲಿ ಕೃಷಿಹೊಂಡವನ್ನು ನಿರ್ಮಿಸಿಕೊಂಡು  ಬೊರ್‌ವೆಲ್‌ನ ನೀರು, ಮಳೆ ನೀರು ಮತ್ತು ಕಾಲುವೆ ನೀರನ್ನು ಆ ಹೊಂಡದಲ್ಲಿ ಸಂಗ್ರಹಣೆ ಮಾಡಿಕೊಳ್ಳುತ್ತಾರೆ. ಇದರಲ್ಲಿನ ನೀರನ್ನು ಹನಿ ನೀರಾವರಿ ಮತ್ತು ಹರಿ ನೀರಾವರಿ ಮೂಲಕ ಬಳಸಿಕೊಂಡು ನೀರಿನ ಅಭಾವವನ್ನು ನಿಭಾಯಿಸಿಕೊಂಡಿದ್ದಾರೆ.
ಇವರು ೨ ಎಕರೆಯಲ್ಲಿ ಬಾಳೆ ಬೆಳೆಯನ್ನು ಬೆಳೆದು ಅಧಿಕ ಇಳುವರಿ ಮತ್ತು ಉತ್ತಮ ಲಾಭವನ್ನು ಪಡೆದಿದ್ದಾರೆ. ಇವರು ಜಿ-೯ ಜೈನ್ ಕಂಪೆನಿಯ ಅಂಗಾಂಶ ಕೃಷಿಯ ಬಾಳೆ ಸಸಿಗಳನ್ನು ಮೂರು ತಿಂಗಳುಗಳ ಮುಂಚಿತವಾಗಿ ಆರ್ಡ್‌ರ್ ಮಾಡುವ ಮೂಲಕ ತರಿಸಿಕೊಂಡು ನಾಟಿ ಮಾಡಿದ್ದಾರೆ. ಪ್ರಸ್ತುತವಾಗಿ ೩ನೇ ವರ್ಷದ ಕುಳಿಯ ಬಾಳೆಯನ್ನು ಬೆಳೆಯುತ್ತಿದ್ದಾರೆ. ಪ್ರಥಮ ವರ್ಷದಲ್ಲಿ ೭೬ ಟನ್, ದ್ವಿತೀಯ ವರ್ಷದಲ್ಲಿ ೫೨ ಟನ್ ಮತ್ತು ತೃತೀಯ ವರ್ಷದಲ್ಲಿ ೪೦ ಟನ್‌ನಷ್ಟು ಇಳುವರಿಯನ್ನು ಪಡೆದು ಒಳ್ಳೆಯ ಲಾಭಾಂಶವನ್ನು ಪಡೆದಿರುತ್ತಾರೆ.
 ಬಾಳೆ ಬೆಳೆಯಲು ಅಂಗಾಂಶ ಕೃಷಿ ಮಾಡಿದ ಸಸಿಗಳನ್ನು ನೆಡುತ್ತಾರೆ. ಅಂಗಾಂಶ ಕೃಷಿ ಮಾಡಿದ ಸಸಿಗಳಿಗೆ ರೋಗನಿರೋಧಕ ಶಕ್ತಿಯು ಇರುವದಲ್ಲದೇ ಹಾಗೂ ಇಳುವರಿಯೂ ಜಾಸ್ತಿ ಕೊಡುತ್ತವೆ.ಇವರು ಸಾವಯವ ಗೊಬ್ಬರಗಳಾದ ಜೀವಾಮೃತ,ಎರೆಹುಳ ಗೊಬ್ಬರ,ವೇಸ್ಟ್ ಡಿಕಂಪೋಸರ್ ಕಲ್ಚರ್ ಮಾಡಿ  ಕೂಡ ಬೆಳೆಗಳಿಗೆ ಹಾಕುತ್ತಾರೆ. ವೇಸ್ಟ್ ಡಿಕಂಪೋಸರ್ ಸಾವಯವ ತ್ಯಾಜ್ಯದಿಂದ ಬಹುವೇಗವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು.ಹಾಗೆ ಇವುಗಳನ್ನು ಬೆಳೆಗಳಿಗೆ ಹಾಕುವದರಿಂದ ಮಣ್ಣಿನ ಗುಣಮಟ್ಟ ಸುಧಾರಿಸುತ್ತದೆ. ವೇಸ್ಟ್ ಡಿಕಂಪೋಸರ್ ೩೦ಗ್ರಾಮ್ ಬಾಟಲ್‌ಗೆ ಕೇವಲ ೨೦ ರೂಪಾಯಿ.
ವೇಸ್ಟ್ ಡಿಕಂಪೋಸರ್ ಮಾಡುವ ವಿಧಾನ
೨ ಕೆ.ಜಿ. ಬೆಲ್ಲವನ್ನು ೨೦೦ ಲೀಟರ್ ನೀರಿರುವ ಪ್ಲಾಸ್ಟಿಕ್ ಡ್ರಮ್‌ಗೆ  ಹಾಕಬೇಕು. ನಂತರ ೧ ಬಾಟಲ್ ವೇಸ್ಟ್ ಡಿಕಂಪೋಸರ್‌ನ್ನು ಸೇರಿಸಿ ದಿನಕ್ಕೆರಡು ಬಾರಿ ಕಟ್ಟಿಗೆಯಿಂದ ಪ್ರದಕ್ಷಿಣಾಕಾರವಾಗಿ ತಿರುಗಿಸಿತ್ತಿರಬೇಕು. ಡ್ರಮ್‌ನ್ನು ಪೇಪರ್ ಅಥವಾ ಕಾರ್ಡಬೊರ್ಡನಿಂದ ಮುಚ್ಚಿರಬೇಕು. ೫ ದಿನಗಳ ನಂತರ ವೇಸ್ಟ್ ಡಿಕಂಪೋಸರ್‌ನ್ನು ಬೆಳೆಗಳಿಗೆ ಹಾಕಬಹುದು. ೧೫ ದಿನಗಳಿಗೊಮ್ಮೆ ಎಲ್ಲ ಬೆಳೆಗಳಿಗೂ ವೇಸ್ಟ್ ಡಿಕಂಪೋಸರ್‌ನ್ನು ಕೊಟ್ಟರೆ ತುಂಬಾ ಒಳ್ಳೆಯದು ಎಂದು ಸಚಿನ ಮೂಲಿಮನಿಯವರು ಹೇಳುತ್ತಾರೆ. ಇದು ಸಾಧ್ಯವಾಗದಿದ್ದರೆ ಒಂದು ಬೆಳೆಗೆ ೨ ಸಲವಾದದೂ ವೇಸ್ಟ್ ಡಿಕಂಪೋಸರ್ ನೀಡಿದರೆ ಉತ್ತಮ ಎಂದು ಹೇಳುತ್ತಾರೆ. ಕೃಷಿಗೆ ಬೇಕಾದ ಜೀವಾಮೃತ, ದಶಪರ್ಣಿ ಕೀಟನಾಶಕವನ್ನು ಇವರೇ ತಯಾರಿಸಿಕೊಳ್ಳುತ್ತಾರೆ.
ಇವರು ತಯಾರಿಸುವ ದಶಪರ್ಣಿ ಕೀಟನಾಶಕ ಮಾಡುವ  ವಿಧಾನ 
೨೦೦ ಲೀ. ನೀರಿಗೆ ೫ ಕೆ.ಜಿ. ಸಗಣಿ, ೨೦ ಲೀ ಗೋಮೂತ್ರವನ್ನು ಹಾಕುತ್ತಾರೆ.ಆ ಮಿಶ್ರಣಕ್ಕೆ ೦.೫ ಕೆ.ಜಿ. ಅರಶಿಣ  ಪುಡಿ, ೦.೫ ಕೆ.ಜಿ. ಶುಂಠಿ, ೧೦ ಗ್ರಾಮ್ ಇಂಗನ್ನು ಹಾಕಿ ೨ ದಿನಗಳು ಹಾಗೆಯೇ ಇಡುತ್ತಾರೆ.
೧ ಕೆ.ಜಿ. ತಂಬಾಕು, ೨ ಕೆ.ಜಿ. ಬೆಳ್ಳುಳ್ಳಿ, ೨ ಕೆ.ಜಿ. ಹಸಿಮೆಣಸಿನಕಾಯಿ ಪೇಸ್ಟ್‌ನ್ನು ಮಿಶ್ರಣ ಮಾಡಿ ಒಂದು ದಿನ ಇಡಬೇಕು. ಮಾರನೇ ದಿನ ಈ ಮಿಶ್ರಣವನ್ನು ಮೇಲಿನ ಮಿಶ್ರಣ (ಮೊದಲ ಮಿಶ್ರಣ)ಕ್ಕೆ ಹಾಕುತ್ತಾರೆ.
೪ ದಿನಗಳ ನಂತರ ಈ ಮಿಶ್ರಣ (ಮೊದಲೆರಡು ಮಿಶ್ರಣ)ಕ್ಕೆ ಮಾವಿನ ಎಲೆ, ಬೇವಿನ ಎಲೆ, ಕತ್ತಾಳೆ, ಔಡಲ ಎಲೆ, ಜಾಲಿ ಎಲೆ, ಸೀತಾಫಲ ಎಲೆ, ಎಕ್ಕಿ ಎಲೆ, ಅರಸಿನ ಎಲೆ, ಚದುರಂಗಿ ಎಲೆ, ಹುಣಸೆಕಾಯಿ ಎಲೆಗಳ ಪೇಸ್ಟ್‌ನ್ನು ಹಾಕಬೇಕು. (ಇವೆಲ್ಲ ಪ್ರತಿಯೊಂದು ಎಲೆಗಳು ಎರಡು ಕೆ.ಜಿ.ಯಲ್ಲಿರಬೇಕು) ಈ ಮಿಶ್ರಣವನ್ನು ದಿನಕ್ಕೆ ೨ ಬಾರಿ ಪ್ರದಕ್ಷಿಣಾಕಾರವಾಗಿ ತಿರುಗಿಸುತ್ತಾರೆ. ೨೧ ದಿನಗಳ ಬಳಿಕ ಇದನ್ನು ಸೋಸಿ ಗಿಡಗಳಿಗೆ ಸಿಂಪಡಿಸಬಹುದು ಎಂದು ಹೇಳುತ್ತಾರೆ.
ಇದಲ್ಲದೇ ಇವರು ಮನೆಗೆ ಬೇಕಾಗುವಷ್ಟು ತೆಂಗಿನ ಮರಗಳು, ವಿವಿಧ ರೀತಿಯ ಬಾಳೆಹಣ್ಣಿನ ಗಿಡಗಳು, ಪೇರಲೆ, ಪಪ್ಪಾಯ ಗಿಡಗಳು, ಮಾವಿನ ಮರ ಮತ್ತು ತರಕಾರಿಗಳು ಇವರ ಕೃಷಿ ಭೂಮಿಯಲ್ಲಿವೆ. ಕೃಷಿ ತಜ್ಞರಲ್ಲಿ ಸಲಹೆಗಳನ್ನು ತಿಳಿದುಕೊಳ್ಳುತ್ತಾ ಕಡಿಮೆ ಅವಧಿಯಲ್ಲಿ ಬೆಳೆಯುವ ಹೊಸ ಹೊಸ ಬೆಳೆಗಳನ್ನು ಬೆಳೆಯುತ್ತಾ ಕೃಷಿಯನ್ನೇ ತಮ್ಮ ಉಸಿರಾಗಿಸಿಕೊಂಡು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರಬೆಳೆಗಳನ್ನು ಬೆಳೆಯುವ ಕನಸನ್ನೇ ಬೆನ್ನತ್ತಿ ಯಶಸ್ವಿಯಾಗುತ್ತಿದ್ದಾರೆ. ಅಲ್ಲದೆ ತಮ್ಮ ಭಾಗದ ರೈತರ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವುಗಳಿಗೆ ಬೇಕಾದ ಔಷದೋಪಚಾರಗಳನ್ನು ಪೂರೈಸುತ್ತಿದ್ದಾರೆ. ಹೊಸ ಬೆಳೆಗಳ ಮಾಹಿತಿಯನ್ನು ನೀಡುತ್ತಾ ರೈತರು ವ್ಶೆಜ್ಞಾನಿಕ ಕೃಷಿಯಲ್ಲಿ ತೊಡಗುವಂತೆ ಉತ್ತೇಜಿಸುತ್ತಿದ್ದಾರೆ. ಈ ಮೂಲಕ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮಧುರಾ ಕೂಡಗಟ್ಟಿಗೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss