ಶಿವಮೊಗ್ಗ: ಸಾಗರ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಅವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.
ತಮಗೆ ಸೋಂಕು ಇರುವುದನ್ನು ಶಾಸಕ ಎಚ್. ಹಾಲಪ್ಪ ಅವರು ಮಂಗಳವಾರ ದೃಢಪಡಿಸಿದ್ದಾರೆ. ಹಾಲಪ್ಪ ಅವರ ಜೊತೆ ಪತ್ನಿ, ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ತಮ್ಮನ್ನು ಸಂಪರ್ಕಿಸಿದವರಿಗೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಪಡುವಂತೆ ಶಾಸಕ ಎಚ್. ಹಾಲಪ್ಪ ಹರತಾಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಸಕ ಎಚ್. ಹಾಲಪ್ಪ, ಸಾಗರದಲ್ಲಿ ಇದ್ದಾಗ ನನಗೆ ಯಾವುದೇ ಸೋಂಕಿನ ಲಕ್ಷಣ ಇರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೆ ಕಾರ್ಯಕ್ರಮ ಸೇರಿದಂತೆ ಬೇರೆಬೇರೆ ಕಡೆ ಓಡಾಟದ ಸಂದರ್ಭದಲ್ಲಿ ಸೋಂಕು ತಗುಲಿರಬಹುದು. ಸೋಮವಾರ ರಾತ್ರಿ ಸೋಂಕು ಇರುವ ವರದಿ ಬಂದಿದ್ದು, ಕೂಡಲೇ ಚಿಕಿತ್ಸೆಗೆ ದಾಖಲಾಗಿದ್ದೇನೆ. ಸಾರ್ವಜನಿಕರು ಸಹ ಸೋಂಕಿನ ಲಕ್ಷಣ ಕಂಡು ಬಂದರೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಬೇಗ ಗುಣಮುಖರಾಗಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಎಚ್. ಹಾಲಪ್ಪ ಹರತಾಳು ಅವರಿಗೆ ಕೊರೋನಾ ಸೋಂಕು ಕಂಡು ಬಂದಿದ್ದು ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.