ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದ ಸಾನ್ ಫ್ರಾನ್ಸಿಸ್ಕೊಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯೆ ಎಲ್ಲಿಯೂ ತಂಗದೆ 15 ಸಾವಿರದ 553 ಕಿಲೋ ಮೀಟರ್ ಪ್ರಯಾಣಿಸಿ ಭಾರತೀಯ ವಿಮಾನ ಏರ್ ಇಂಡಿಯಾ ದಾಖಲೆ ಸೃಷ್ಟಿಸಿದೆ. ಮತ್ತೊಂದು ವಿಶೇಷತೆ ಏನಂದರೆ ಫ್ಲೈಟ್ ಕಮಾಂಡರ್ ಕನ್ನಡ ಭಾಷೆಯಲ್ಲೇ ಘೋಷಣೆ ಮಾಡಿ ಪ್ರಯಾಣಿಕರನ್ನು ಅಚ್ಚರಿ ಮೂಡಿಸಿದ್ದು.
ಸಾನ್ ಫ್ರಾನ್ಸಿಸ್ಕೊಗೆ ತಲುಪಲು 15 ಗಂಟೆ 14 ನಿಮಿಷ ಸಮಯ
ಬೋಯಿಂಗ್ 777-200 ಲಾಂಗ್ ರೇಂಜ್ ವಿಮಾನ ಕಳೆದ ಸೋಮವಾರ ನಸುಕಿನ ಜಾವ ನಾರ್ತ್ ಪೋಲ್ ಮೂಲಕ ಆಗಮಿಸಿದ್ದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಏರ್ ಇಂಡಿಯಾ ವಿಮಾನ ಫೆಸಿಫಿಕ್ ಸಾಗರ ಮೂಲಕ ಹಾರಿ ಹೋಗಿದೆ. ಇಲ್ಲಿಂದ ಸಾನ್ ಫ್ರಾನ್ಸಿಸ್ಕೊಗೆ ತಲುಪಲು 15 ಗಂಟೆ 14 ನಿಮಿಷ ಸಮಯ ತೆಗೆದುಕೊಂಡಿದೆ. ಬೆಂಗಳೂರಿನಿಂದ ಸಾನ್ ಫ್ರಾನ್ಸಿಸ್ಕೊಗೆ 220 ಪ್ರಯಾಣಿಕರು ತೆರಳಿದ್ದು ನಿನ್ನೆ ಸಂಜೆ 4.55ಕ್ಕೆ (ಭಾರತೀಯ ಕಾಲಮಾನ ಬೆಳಗಿನ ಹೊತ್ತು 6.25ಕ್ಕೆ) ತಲುಪಿದೆ.
ಪ್ರಯಾಣಿಕರಿಗೆ ಸಂತಸ ನೀಡಿದೆ
ಪೈಲಟ್ ಆಗಿ ತಮ್ಮ ಪ್ರಯಾಣ ಬಗ್ಗೆ ಮಾತನಾಡಿದ ಬೆಂಗಳೂರು ಮೂಲದ ವಿಮಾನ ಕಮಾಂಡರ್ ಸಿ ವಿ ಮಧು, ಪಬ್ಲಿಕ್ ಅನೌನ್ಸ್ ಮೆಂಟ್ ವ್ಯವಸ್ಥೆಯಲ್ಲಿ ವಿಮಾನ ಹಾರಾಟ ಮಾಡುವಾಗ ಪ್ರಯಾಣಿಕರೊಂದಿಗೆ ನಾನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ. ಇದು ಪ್ರಯಾಣಿಕರಿಗೆ ಅಚ್ಚರಿ ಹಾಗೂ ಖುಷಿಯನ್ನು ಉಂಟುಮಾಡಿತ್ತು ಎಂದಿದ್ದಾರೆ.
ಅವಧಿ ಮುನ್ನವೇ ತಲುಪಿದೆವು
ಈ ಬಗ್ಗೆ ಸಾನ್ ಫ್ರಾನ್ಸಿಸ್ಕೊದಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಿ.ವಿ. ಮಧು, ಸುಲಭವಾಗಿ ಸರಾಗವಾಗಿ ವಿಮಾನ ಹಾರಾಟ ಸಾಗಿತು. ಫೆಸಿಫಿಕ್ ಸಮುದ್ರ ಮೂಲಕ ಹಾದು ಹೋಗಿ ಅವಧಿ ಮುನ್ನವೇ ತಲುಪಿದೆವು. ನಾನು ಕ್ಯಾಪ್ಟನ್ ಆಗಿ ಮೊದಲು ಕನ್ನಡದಲ್ಲಿ, ನಂತರ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಘೋಷಣೆ ಮಾಡಿದೆ ಎಂದರು.
ವಿಮಾನದಲ್ಲಿ ಕ್ಯಾಪ್ಟನ್ ದಿಲೀಪ್ ಡೆಸ್ಮೊಂಡ್, ಕ್ಯಾಪ್ಟನ್ ಕರನ ಅಗರ್ವಾಲ್ ಮತ್ತು ಸಹ ಪೈಲಟ್ ಸಿಮ್ರಂಜಿತ್ ಸಿಂಗ್ ಇದ್ದರು.