spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಮಾನ್ಯ ವ್ಯಕ್ತಿ; ಆದರೆ ಅಸಾಮಾನ್ಯ ವ್ಯಕ್ತಿತ್ವ! ಚಕ್ಕೋಡಬೈಲು ಬೆನಕ ಭಟ್ಟರು

- Advertisement -Nitte

ಈ ಹೆಸರು ಕೇಳಿದೊಡನೆ ಶಿವಮೊಗ್ಗ ಜಿಲ್ಲೆಯ ಸಂಘ ಪರಿವಾರದ ಕಾರ್ಯಕರ್ತರಿಗೆ, ಸ್ವಯಂ ಸೇವಕರಿಗೆ, ಹಿತೈಷಿಗಳಿಗೆ, ಅಭಿಮಾನಿಗಳಿಗೆ ಅದೇನೋ ಒಂದು ಬಗೆಯ ಸಂಭ್ರಮ. ಮೈಮನಗಳಲ್ಲಿ ಪುಳಕದ ಸಂಚಲನ. ಆ ಹೆಸರು ಕೇಳಿದೊಡನೆ ಸಕ್ರಿಯ ಕಾರ್ಯಕರ್ತರಿಗೆ ಇನ್ನಷ್ಟು ಕಾರ್ಯ ಹೆಚ್ಚು ಮಾಡುವ ತವಕ. ನಿಷ್ಕ್ರಿಯರಾದವರಿಗೆ ಮನದಲ್ಲೇ ಮುಜುಗರ. ತಾವು ನಿಷ್ಕ್ರಿಯರಾಗಬಾರದಿತ್ತು, ಇನ್ನಾದರೂ ಸಕ್ರಿಯರಾಗಬೇಕು ಎಂಬ ಪ್ರೇರಣೆ. ಸಂಘ ವಿರೋಧಿಗಳಿಗೂ ಅವರ ಹೆಸರು ಕೇಳಿದೊಡನೆ ‘ಛೆ, ತಾವು ಸಂಘಕ್ಕೆ ಈ ಪರಿ ಟೀಕಿಸಬಾರದಿತ್ತು’ ಎಂಬ ಪಶ್ಚಾತ್ತಾಪದ ಭಾವನೆ. ಇನ್ನು ಸಮಸ್ಯೆಗಳಿಂದ ಹೈರಾಣಾದವರ ಪಾಲಿಗಂತೂ ಆ ಹೆಸರು ಒಂದು ಸಮಾಧಾನದ, ಭರವಸೆಯ ಬೆಳಕು.

ಈ ಮಾತುಗಳಲ್ಲಿ ಉತ್ಪ್ರೇಕ್ಷೆ ಖಂಡಿತ ಇಲ್ಲ. ಏಕೆಂದರೆ ಮೊನ್ನೆ ಫೆ. 26ರಂದು ಈ ಲೋಕದಿಂದ ದೂರವಾದ ಬೆನಕ ಭಟ್ಟರ ವ್ಯಕ್ತಿತ್ವವೇ ಅಂತಹುದಾಗಿತ್ತು. ಮೇಲ್ನೋಟಕ್ಕೆ ಅತ್ಯಂತ ಸರಳ, ಗ್ರಾಮೀಣ ನೋಟದ ಸಾಮಾನ್ಯ ವ್ಯಕ್ತಿ. ಬಿಳಿ ಪಂಚೆ, ಬಿಳಿ ಶರಟು, ಕಾಲಿಗೊಂದು ಸಾದಾ ಚಪ್ಪಲಿ, ಹೆಗಲಲ್ಲೊಂದು ಬ್ಯಾಗು ಅವರ ಖಾಯಂ ಹೆಗ್ಗುರುತು. ಬೇರೆ ಬಣ್ಣದ ಬಟ್ಟೆ ಹಾಕಿದ್ದನ್ನು ನಾನಂತೂ ಕಂಡಿಲ್ಲ. ಎಲ್ಲವೂ ಶುಭ್ರ ಶ್ವೇತ. ಉಡುಗೆಯಂತೆಯೇ ಬದುಕು ಕೂಡ ಶ್ವೇತಮಯ. ಹುಡುಕಿದರೂ ಒಂದು ಕಪ್ಪು ಚುಕ್ಕಿ ಬಹುಶಃ ಸಿಗಲಾರದು. ಮುಖದಲ್ಲಿ ಸದಾ ಮಂದಹಾಸ. ಕಣ್ಣುಗಳಲ್ಲಿ ಉತ್ಸಾಹದ ಕಾಂತಿ. ತೀರಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಿಂದ ಹೊರಬಂದಾಗಲೂ ಮಾಸದ ಅದೇ ಮಂದಹಾಸ. ಕಣ್ಣುಗಳಲ್ಲಿ ಕ್ಷೀಣವಾಗದ ಅದೇ ಕಾಂತಿ. ತಮಾಷೆ, ನಗು, ಹಾಸ್ಯಪ್ರಜ್ಞೆ, ಎಲ್ಲರೊಂದಿಗೆ ಆತ್ಮೀಯವಾಗಿ ಮಾತಾಡುವ, ವಿನಯವೇ ಮೈವೆತ್ತ ಸ್ವಭಾವ. ನೋಡಲು ಸಾಮಾನ್ಯ. ಆದರೆ ಅರ್ಥ ಮಾಡಿಕೊಳ್ಳಲು ಅಸಾಮಾನ್ಯ. ಒಬ್ಬ ವ್ಯಕ್ತಿ ಕೆಲವರಿಗೆ ಆಪ್ತನಾಗಿರುವುದು ಸಾಧ್ಯ. ಆದರೆ ಒಬ್ಬ ವ್ಯಕ್ತಿ – ಆತ ಎಷ್ಟೇ ಪರಿಪೂರ್ಣವಾಗಿರಲಿ – ಆತನಿಗೆ ಪರಿಚಯವಿರುವ, ಪರಿಚಯವಿರದ ಪ್ರತಿಯೊಬ್ಬರಿಗೂ ಅತ್ಯಂತ ಆಪ್ತನೆನಿಸುವುದಿದೆಯಲ್ಲ, ಅದು ಎಲ್ಲರಿಗೂ ಸಾಧ್ಯವಿಲ್ಲ. ಬೆನಕ ಭಟ್ಟರು ಮಾತ್ರ ಈ ಮಾತಿಗೆ ಅಪವಾದ. ಸಕ್ಕರೆಗೆ ಇರುವೆ ಮುತ್ತುವಂತೆ ಬೆನಕ ಭಟ್ಟರನ್ನು ಕಂಡೊಡನೆ ಆಕರ್ಷಿತರಾಗದವರೇ ಇರಲಿಲ್ಲ. ಅಂತಹ ಆಯಸ್ಕಾಂತೀಯ ಗುಣದ ವ್ಯಕ್ತಿತ್ವ ಅವರದಾಗಿತ್ತು. ಅದನ್ನು ‘ಗಾಡ್ ಗಿಫ್ಟ್’ ಎನ್ನುವುದಕ್ಕಿಂತ ಸಾಮಾಜಿಕ ಕಾರ್ಯ ನಿರ್ವಹಿಸುತ್ತಾ ನಿರ್ವಹಿಸುತ್ತಾ ಅವರಾಗಿ ರೂಪಿಸಿಕೊಂಡ ಸ್ವಭಾವ ವಿಶೇಷ ಎನ್ನುವುದೇ ಹೆಚ್ಚು ಸೂಕ್ತ.

ಒಂದು ಕುಟುಂಬದಲ್ಲಿರುವ ಸದಸ್ಯರೊಳಗೇ (ಈಗಂತೂ ಕುಟುಂಬದ ಸದಸ್ಯರ ಸಂಖ್ಯೆ ತೀರಾ ಇಳಿಮುಖವಾಗಿ ಎರಡಂಕಿ ದಾಟುತ್ತಿಲ್ಲ!) ಅನ್ಯೋ ನ್ಯತೆ, ಆತ್ಮೀಯತೆ ಇರುವುದು ಈಗಿನ ಕಾಲಮಾನದಲ್ಲಿ ವಿರಳ. ಆದರೆ ಬೆನಕ ಭಟ್ಟರು ನೂರಾರು ಕುಟುಂಬಗಳ ಪಾಲಿಗೆ ಸ್ನೇಹಸೇತು, ಮಾರ್ಗದರ್ಶಕ, ಆಪ್ತ ಸಮಾಲೋಚಕ, ಸ್ನೇಹಿತ ಎಲ್ಲವೂ ಆಗಿದ್ದರು. ಯಾರದ್ದೇ ಎಂತಹುದೇ ಗಹನ, ಘನಗಂಭೀರ ಸಮಸ್ಯೆ ಇರಲಿ, ಅದನ್ನು ಅತ್ಯಂತ ಸಹನೆಯಿಂದ ತಣ್ಣಗೆ ಕುಳಿತು ಕೇಳುವ ಕಿವಿ ಅವರಿಗಿತ್ತು. ಸಹನೆಯಿಂದ ಕೇಳುವ ಈ ಗುಣವೇ ಹಲವರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿತ್ತು. ಅತ್ಯಂತ ಜಟಿಲವೆನಿಸುವ ಕೌಟುಂಬಿಕ ಸಮಸ್ಯೆಗಳು, ವ್ಯಾಜ್ಯಗಳು, ದಾಯಾದಿ ಕಲಹ ಇತ್ಯಾದಿಗಳನ್ನು ಪರಿಹರಿಸುವುದರಲ್ಲಿ ಅವರು ಸಿದ್ಧಹಸ್ತರು. ಆದರೆ ಇಂತಹ ಜಟಿಲ ಸಮಸ್ಯೆಗಳನ್ನು ಪರಿಹರಿಸಿದವರು ಅವರೇ ಎಂಬುದು ಮಾತ್ರ ಯಾರಿಗೂ ತಿಳಿಯುತ್ತಿರಲಿಲ್ಲ.

ಬೆನಕಭಟ್ಟರು ತುಂಬಾ ಓದಿದವರಾಗಿರಲಿಲ್ಲ. ಕೃಷಿ, ಮನೆ ನಡೆಸುವ ಜವಾಬ್ದಾರಿಯಿಂದಾಗಿ ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಆದರೆ ಅವಿರತ ಸಂಘ ಕಾರ್ಯದ ಒತ್ತಡದ ನಡುವೆಯೂ ತಮ್ಮ ಎಲ್ಲ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಅವರೆಲ್ಲರೂ ವಿದ್ಯಾವಂತರಾಗುವಂತೆ ಮಾಡಿದರು. ಸರ್ಕಾರಿ ಶಾಲೆಗಳಲ್ಲಿ ಎಷ್ಟೋ ಜನರಿಗೆ ಉತ್ತಮ ವಿದ್ಯಾಭ್ಯಾಸ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಬೆನಕ ಭಟ್ಟರು ತೀರ್ಥಹಳ್ಳಿಯಲ್ಲಿ ಮಕ್ಕಳ ಶಿಕ್ಷಣ, ಸಂಸ್ಕಾರಗಳಿಗೆ ಭದ್ರ ಬುನಾದಿ ಹಾಕುವ, ಅವರನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡುವ ‘ಸೇವಾ ಭಾರತಿ’ ಶಾಲೆಗಳಿಗೆ ತಮ್ಮ ಸಮಾನ ಮನಸ್ಕ ಗೆಳೆಯರೊಡನೆ ಕೈಜೋಡಿಸಿದ ಅಗ್ರೇಸರ. ಇವತ್ತು ತೀರ್ಥಹಳ್ಳಿಯಲ್ಲಿ ಸೇವಾಭಾರತಿ ಶಾಲೆಗಳು ಪೋಷಕರ, ಊರಿನವರ ಪ್ರಶಂಸೆಗೆ ಪಾತ್ರವಾಗಿದ್ದರೆ ಅದಕ್ಕೆ ಕಾರಣಕರ್ತರಲ್ಲಿ ಬೆನಕ ಭಟ್ಟರ ಪಾತ್ರ ದೊಡ್ಡದು.

ಒಂದು ಕಾಲವಿತ್ತು. ಅದು 60-70ರ ದಶಕ. ತೀರ್ಥಹಳ್ಳಿ ತಾಲೂಕು ಸಮಾಜವಾದಿಗಳ ಭದ್ರಕೊಟೆ ಎಂದೇ ಬಿಂಬಿತವಾಗಿತ್ತು. ಶಾಂತವೇರಿ ಗೋಪಾಲಗೌಡರು, ಕೋಣಂದೂರು ಲಿಂಗಪ್ಪ, ಶ್ಯಾಮಣ್ಣ, ಕಡಿದಾಳ್ ದಿವಾಕರ ಮೊದಲಾದವರದೇ ರಾಜಕೀಯ ಪಾರುಪತ್ಯ. ಜನಸಂಘದಿಂದ ಸ್ಪರ್ಧಿಸುತ್ತಿದ್ದ ಎಂ. ಪುರುಷೋತ್ತಮರಾವ್ ಮತ್ತಿತರ ಅಭ್ಯರ್ಥಿಗಳಿಗೆ ಪ್ರತಿಬಾರಿ ಠೇವಣಿ ನಷ್ಟ ಕಟ್ಟಿಟ್ಟ ಬುತ್ತಿ. ಸಂಘದ ಕಾರ್ಯ ಇನ್ನೂ ಶೈಶವಾವಸ್ಥೆಯಲ್ಲಿದ್ದ ಕಾಲ. ಆಗ ಶೃಂಗೇರಿ ಕೊಪ್ಪ ತೀರ್ಥಹಳ್ಳಿಯ ಎಲ್ಲ ಗ್ರಾಮಗಳಿಗೆ ಕಾಲ್ನಡಿಗೆ ಇಲ್ಲವೇ ಕೆಲವೆಡೆ ಸೈಕಲ್‌ನಲ್ಲಿ ಸಂಚರಿಸಿ, ಬೆಟ್ಟ ಗುಡ್ಡ ಹತ್ತಿಳಿದು, ಹಳ್ಳಿ, ಕಾಡು ದಾಟಿ, ಹಸಿವೆಯ ಸಂಕಟ ಬದಿಗಿಟ್ಟು  ಸಂಘಕಾರ್ಯ ಸಸಿಗೆ ನೀರೆರೆದು ಬೆಳೆಸಿ, ಅದು ಮುಂದೆ ಹುಲುಸಾದ ಫಸಲು ನೀಡುವಂತೆ ಶ್ರಮಿಸಿದವರು ಪಂಚಪಾಂಡವರೆಂದೇ ಜನಪ್ರಿಯರಾಗಿದ್ದ – ಎಂ. ಪುರುಷೋತ್ತಮ ರಾವ್, ತಾರಗೊಳ್ಳಿ ನಾಗರಾಜ ರಾವ್, ಬೆನಕ ಭಟ್ಟರು, ಬಸವಾನಿ ನಂಜುಂಡಯ್ಯ ಮಾಸ್ಟ್ರು ಹಾಗೂ ಅನಂತರಾಜು. ಈ ಪೈಕಿ ಈಗ ಬದುಕಿರುವವರು ಅನಂತರಾಜು ಅವರು ಮಾತ್ರ. ತೀರ್ಥಹಳ್ಳಿಯ ಸಂಘ ಕಾರ್ಯ ಬೆಳವಣಿಗೆಯ ಇತಿಹಾಸದಲ್ಲಿ ಇವರೆಲ್ಲರೂ ಪ್ರಾತಃಸ್ಮರಣೀಯ ವ್ಯಕ್ತಿಗಳು.

ಆಗ ಸಂಚಾರಕ್ಕೆ ಕಾರ್‍ಯಕರ್ತರ ಬಳಿ ವಾಹನಗಳಿರಲಿಲ್ಲ. ತಾಲೂಕು ಕೇಂದ್ರಗಳಿಗೆ ಬಸ್ಸು ಸೌಕರ್ಯವೂ ಅಷ್ಟಾಗಿರಲಿಲ್ಲ. ಸೈಕಲ್ಲೇ ಆಗಿನ ವಿಲಾಸಿ ವಾಹನ. ತೀರ್ಥಹಳ್ಳಿಗೆ ಸಂಘದ ಹಿರಿಯ ಪ್ರಚಾರಕರಾದ ಕೃ. ಸೂರ್‍ಯನಾರಾಯಣ ರಾವ್(ಸೂರು), ಹೊ.ವೆ. ಶೇಷಾದ್ರಿ, ನ. ಕೃಷ್ಣಪ್ಪ ಮೊದಲಾದವರು ಬಂದರೆ ಕಮ್ಮರಡಿಯಿಂದ ಶೃಂಗೇರಿಗೆ ಸೂರು ಅವರು ಪ್ರವಾಸ ಹೋಗಬೇಕಿತ್ತು. ಸರಿ, ಅವರಿಗೆ ಸೈಕಲ್ ವ್ಯವಸ್ಥೆ ಮಾಡಲಾಯಿತು. ಆದರೆ ನಡುದಾರಿಯಲ್ಲೇ ಸೈಕಲ್ ಪಂಚರ್! ಉಳಿದ ದೂರವನ್ನು ಸೈಕಲ್ ತಳ್ಳಿಕೊಂಡೇ  ಕ್ರಮಿಸಲಾಯ್ತು ಎಂದು ಬೆನಕ ಭಟ್ಟರೇ ಒಮ್ಮೆ ಹೇಳಿದ್ದರು.

ಆಗ ಕಾಲ್ನಡಿಗೆ, ಸೈಕಲ್ ಪ್ರಯಾಣ ಅನಿವಾರ್ಯವೆನಿಸಿತ್ತು. ಈಗಾದರೋ ಹೆಚ್ಚಿನ ಕಾರ್ಯಕರ್ತರ ಬಳಿ ದ್ವಿಚಕ್ರ, ಚತುಷ್ಚಕ್ರ ವಾಹನಗಳಿವೆ. ಓಡಾಡಲು ಸಾಕಷ್ಟು ಬಸ್ಸ್ಸು, ಟ್ಯಾಕ್ಸಿಗಳೂ ಇವೆ. ಆದರೆ ಹಳ್ಳಿಹಳ್ಳಿಗೆ ಓಡಾಡಿ ಜನರ ದುಃಖದುಮ್ಮಾನ ಕೇಳುವವರು ವಿರಳ. ಅನಿವಾರ್ಯತೆ ಇಲ್ಲದಿದ್ದರೂ ಕಡಿಮೆ ದೂರದ ಊರುಗಳಿಗೆ ತೆರಳಲು ಪ್ರಮುಖ ಕಾರ್ಯಕರ್ತರು ಕಾರು ಆಶ್ರಯಿಸುವುದುಂಟು. ಅವಶ್ಯಕತೆ, ತುರ್ತು ಕಾರ್ಯ ಇಲ್ಲದಿದ್ದಾಗಲೂ ದೂರದ ಊರುಗಳಿಗೆ ತೆರಳಲು ವಿಮಾನ ಪ್ರಯಾಣ ಮಾಡುವವರುಂಟು. ಬೆನಕ ಭಟ್ಟರು ಕೊನೆಯ ದಿನಗಳಲ್ಲಿ ತಮ್ಮ ಅನಾರೋಗ್ಯ ಕಾರಣದಿಂದಾಗಿ ಪ್ರಯಾಣಕ್ಕೆ ಕಾರನ್ನು ಆಶ್ರಯಿಸಿದ್ದು ಬಿಟ್ಟರೆ, ಅವರ ಹೆಚ್ಚಿನೆಲ್ಲ ಪ್ರಯಾಣ ಬಸ್ಸು, ರೈಲುಗಳಲ್ಲೇ. ಅವರದು ಪರಿಶ್ರಮದ, ಬದ್ಧತೆಯ ಬದುಕು.

ಸಾಮಾಜಿಕ ಕ್ರಾಂತಿ: ಬ್ರಾಹ್ಮಣರ ಮಡಿವಂತ ಮನೆತನ ಎಂಬ ಹಣೆಪಟ್ಟಿ ಕಳಚಿ, ತಮ್ಮ ಮನೆಯ ಬಾಗಿಲನ್ನು ಎಲ್ಲ ಜಾತಿಮತದವರಿಗೆ ಮುಕ್ತವಾಗಿರಿಸಿದ್ದು ತೀರ್ಥಹಳ್ಳಿ ತಾಲೂಕಿನಲ್ಲಿ ಜರುಗಿದ ಸಾಮಾಜಿಕ ಕ್ರಾಂತಿಗೆ ನಾಂದಿಯಾಯಿತೆನ್ನಬಹುದು. ಅವರ ಮನೆಗೆ ಯಾವ ಜಾತಿಯವರೇ ಹೋಗಲಿ, ಮನೆಯವರೊಟ್ಟಿಗೆ ಅಡುಗೆ ಕೋಣೆಯಲ್ಲೇ ಒಟ್ಟಿಗೇ ಊಟ, ತಿಂಡಿ. ಬ್ರಾಹ್ಮಣೇತರ ವ್ಯಕ್ತಿಗಳು ಬೆನಕ ಭಟ್ಟರ ಈ ನಡೆಯಿಂದಾಗಿ ಕೆಲವು ಬಾರಿ ಮುಜುಗರಕ್ಕೀಡಾಗಿದ್ದೂ ಇದೆ. ಜಾತಿಭೇದ ಜೋರಾಗಿದ್ದ ಆ ಕಾಲದಲ್ಲೆ ಸಾಮಾಜಿಕ ಸಾಮರಸ್ಯ ಸಾಧಿಸಿದ ಸಾಹಸ ಅವರದು. ಹಲವು ವರ್ಷಗಳ ಕಾಲ ಅವರ ಮನೆಯಲ್ಲಿ ವರ್ಷಕ್ಕೊಮ್ಮೆ ನವದಂಪತಿಗಳ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆ ವರ್ಷ ಮದುವೆಯಾದ ದಂಪತಿಗಳು (ಯಾವುದೇ ಜಾತಿಯವರಿರಲಿ) ಬಂದು, ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು, ಸಹಭೋಜನ ಸವಿದು, ಹಿರಿಯರ ಆಶೀರ್ವಾದ ಪಡೆದು ಹೋಗುತ್ತಿದ್ದ ದೃಶ್ಯ ನಿಜಕ್ಕೂ ಮರೆಯಲು ಸಾಧ್ಯವಿಲ್ಲ. ಸ್ವಂತ ದುಡ್ಡಿನಿಂದಲೇ ಈ ಕಾರ್ಯಕ್ರಮವನ್ನು ಬೆನಕ ಭಟ್ಟರು ನಿರ್ವಹಿಸುತ್ತಿದ್ದರು ಎಂಬುದು ವಿಶೇಷ. ಸಾಮಾಜಿಕ ಸಾಮರಸ್ಯದ ಕುರಿತು ಅವರೆಂದೂ ಉದ್ದುದ್ದ ಭಾಷಣ ಬಿಗಿಯಲಿಲ್ಲ. ಅವರು ಭಾಷಣ, ಬೌದ್ಧಿಕ್ ಮಾಡುತ್ತಿದ್ದುದೇ ಅಪರೂಪ. ಆದರೆ ಕೃತಿಯ ಮೂಲಕವೇ  ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಕಿದ್ದರು.

ತೀರ್ಥಹಳ್ಳಿಯ ಈಗಿನ ಶಾಸಕರಾಗಿರುವ ಆರಗ ಜ್ಞಾನೇಂದ್ರ ಬೆನಕ ಭಟ್ಟರ ರಕ್ತ ಸಂಬಂಧಿಕರೇನಲ್ಲ. ಅವರ ಜಾತಿಗೆ ಸೇರಿದವರೂ ಅಲ್ಲ. ಹೆಚ್ಚೆಂದರೆ ಸಂಘದ ಸ್ವಯಂಸೇವಕನೆಂಬ ಹಿನ್ನೆಲೆಯ ನಂಟು. ಆದರೆ 80ರ ದಶಕದಲ್ಲಿ ತಂದೆಯ ಸ್ಥಾನದಲ್ಲಿ ನಿಂತು ಜ್ಞಾನೇಂದ್ರ ಅವರ ಮದುವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದವರು ಇದೇ ಬೆನಕ ಭಟ್ಟರು. ಅವರ ಮನೆಗೆ ಯಾರೇ ಹೋಗಲಿ, ಅವರು ಮೊದಲು ಕೇಳುತ್ತಿದ್ದುದು – ತಿಂಡಿ ಆಯ್ತಾ? ಊಟ ಆಗಿದೆಯಾ? ಎಂಬ ಪ್ರಶ್ನೆಗಳನ್ನು. ದೂರದಿಂದ ಹಸಿದ ಹೊಟ್ಟೆಯಲ್ಲಿ ತೆರಳಿದವರಿಗೆ ಇಂತಹ ಪ್ರಶ್ನೆಗಳು ಅದೆಷ್ಟು ಆಪ್ಯಾಯಮಾನಕರ ಎಂಬುದು ಆ ಸಂಕಟ ಅನುಭವಿಸಿದವರಿಗಷ್ಟೇ ಗೊತ್ತು. ಅದೇ ಸ್ವಭಾವ ಅವರ ಪತ್ನಿ ವಿಶಾಲಮ್ಮ ಮತ್ತು ಮಕ್ಕಳಲ್ಲೂ ಮನೆ ಮಾಡಿರುವುದು ಉತ್ತಮ ಸಂಸ್ಕಾರದ ಫಲ.

ಬೆನಕ ಭಟ್ಟರ ಪಾರ್ಥಿವ ದೇಹವನ್ನು ಮೈಸೂರಿನಿಂದ ಫೆ. 26ರಂದು ಸಂಜೆ ತೀರ್ಥಹಳ್ಳಿಗೆ ತಂದಾಗ ಅಂತಿಮ ದರ್ಶನಕ್ಕೆ ಕಿಕ್ಕಿರಿದ ಸಾವಿರಾರು ಜನ. ತಡರಾತ್ರಿ ಚಕ್ಕೋಡಬೈಲಿನಲ್ಲಿ ಅಂತಿಮ ಸಂಸ್ಕಾರದ ವೇಳೆಯಲ್ಲೂ ಜನಸಾಗರ. ‘ಶರಣರ ಗುಣವನ್ನು ಮರಣದಲ್ಲಿ ನೋಡು’ ಎಂಬ ಮಾತನ್ನು ಈ ದೃಶ್ಯ ನೆನಪಿಸುತ್ತಿತ್ತು.

ಬೆನಕ ಭಟ್ಟರಿಗೆ ನೀವು ಹೀಗೆಯೇ ಇರಬೇಕೆಂದು ಯಾರೂ ಹೇಳಿರಲಿಲ್ಲ. ಆದರೆ ಹಿರಿಯರನ್ನು ನೋಡಿ ಉತ್ತಮ ನಡೆನುಡಿಗಳನ್ನು ರೂಢಿಸಿಕೊಂಡರು. ಸತ್ಯವಂತರಾಗಿ ಪಾರದರ್ಶಕ ಜೀವನ ನಡೆಸಿದರು. ಸಮಾಜಮುಖಿಯಾಗಿ ಬಾಳಿದರು. ಅಗಣಿತ ಬದುಕುಗಳು ಹಸನಾಗುವಂತೆ ಶ್ರಮಿಸಿದರು.

ನಾವೆಲ್ಲರೂ ಅಷ್ಟೇ. ಬೆನಕ ಭಟ್ಟರು ಹಾಗಿದ್ದರು, ಹೀಗಿದ್ದರು ಎಂದು ಹಾಡಿ ಹೊಗಳಿಬಿಟ್ಟರೆ ನಾವೇನೂ ದೊಡ್ಡವರಾಗುವುದಿಲ್ಲ. ಅವರ ಆದರ್ಶಗಳು, ಹಾಕಿಕೊಟ್ಟ ಮೇಲ್ಪಂಕ್ತಿ, ರೂಢಿಸಿಕೊಂಡ ಸಮಾಜಮುಖಿ ಗುಣಗಳಲ್ಲಿ ಒಂದಿಷ್ಟನ್ನಾದರೂ ಅಳವಡಿಸಿಕೊಂಡು, ಅವರು ನಡೆದ ಹಾದಿಯಲ್ಲಿ ಸಾಗಿದರೆ, ಅದೇ ಬೆನಕ ಭಟ್ಟರಿಗೆ ನಾವು ಅರ್ಪಿಸಬಹುದಾದ ನಿಜವಾದ ಶ್ರದ್ಧಾಂಜಲಿ.
-ದು.ಗು. ಲಕ್ಷ್ಮಣ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss