ಹೊಸದಿಲ್ಲಿ : ಸೋಮವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವುದಕ್ಕೆ ಮೊದಲೇ ನಾಯಕತ್ವ ವಿಚಾರವಾಗಿ ಪಕ್ಷದಲ್ಲಿ ಭಾರೀ ಆಂತರಿಕ ತುಮುಲ ಉಂಟಾಗಿರುವುದಾಗಿ ತಿಳಿದುಬಂದಿದೆ. ರಾಹುಲ್ ಗಾಂಧಿಗೆ ನಿಕಟವಾಗಿರುವ ಒಂದು ಗುಂಪು ಅವರೇ ಮತ್ತೆ ಅಧ್ಯಕ್ಷರಾಗಬೇಕೆಂದು ಒತ್ತಡ ಹೇರಿದರೆ, ಹಾಲಿ ಸಂಸದರು ಮತ್ತು ಮಾಜಿ ಸಚಿವರ ಗುಂಪು ಸಾಮೂಹಿಕ ನಾಯಕತ್ವಕ್ಕಾಗಿ ಒತ್ತಾಯಿಸುತ್ತಿರುವುದು ಈ ತುಮುಲಕ್ಕೆ ಕಾರಣವಾಗಿದೆ. ಈ ನಡುವೆ ಅಗತ್ಯಬಿದ್ದರೆ ತಾನು ರಾಜೀನಾಮೆ ನೀಡಲು ತಯಾರು ಎಂಬುದಾಗಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.
ಸುಮಾರು ೨೩ಮಂದಿ ಪ್ರಮುಖ ನಾಯಕರ ಗುಂಪೊಂದು ಸೋನಿಯಾ ಗಾಂಧಿಯವರಿಗೆ ಪಂಚಸೂತ್ರಗಳನ್ನು ಪ್ರಸ್ತಾವಿಸಿ ಪತ್ರವೊಂದನ್ನು ಬರೆದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಈಗಾಗಲೇ ಕಾಂಗ್ರೆಸ್ ನಾಯಕತ್ವ ಬದಲಾವಣೆ ಮತ್ತು ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿ ೧೦೦ರಷ್ಟು ಕಾಂಗ್ರೆಸ್ ನಾಯಕರು ಸೋನಿಯಾಗೆ ಪತ್ರಬರೆದಿದ್ದಾರೆ ಎಂಬ ವರದಿಗಳ ನಡುವೆಯೇ ಈ ೨೩ನಾಯಕರ ಒತ್ತಡ ಪಕ್ಷದೊಳಗಿನ ತುಮುಲವನ್ನು ವ್ಯಕ್ತಗೊಳಿಸಿದೆ. ಪಕ್ಷದಲ್ಲಿ ಸಕ್ರಿಯ ನಾಯಕತ್ವದ ಅಗತ್ಯವಿದ್ದು ಪಕ್ಷದ ಸ್ಥಿತಿಗತಿ ಮತ್ತು ಅದು ರಾಜ್ಯಗಳಲ್ಲಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಪ್ರಶ್ನೆಗಳನ್ನು ಕೇಳಿ, ತಕ್ಷಣ ನೂತನ ನಾಯಕನನ್ನು ಆಯ್ಕೆ ಮಾಡದೆ ಹೋದಲ್ಲಿ ಕಾಂಗ್ರೆಸ್ಗೆ ಬೆಲೆಕಟ್ಟಲಾಗದ ರೀತಿಯಲ್ಲಿ ಭಾರೀ ಹಾನಿಯಾಗಲಿದೆ ಎಂಬುದಾಗಿ ಈ ನಾಯಕುರು ಎಚ್ಚರಿಸಿದ್ದಾರೆನ್ನಲಾಗಿದೆ.
ಪಕ್ಷದ ಪ್ರಮುಖ ನಾಯಕರಿಬ್ಬರು ಬರೆದಿರುವ ಐದು ಪುಟಗಳ ಈ ಪತ್ರಕ್ಕೆ ಸುಮಾರು ೨೦ಮಂದಿ ಸಂಸದರು, ಮಾಜಿ ಸಚಿವರು ಸಹಿ ಮಾಡಿದ್ದಾರೆನ್ನಲಾಗಿದ್ದು, ಸೋನಿಯಾಗೆ ಈ ಪತ್ರ ಬರೆದಿರುವ ನಾಯಕರ ನಿಲುವಿಗೆ ಪಕ್ಷ ಹೈಕಮಾಂಡ್ ಗರಂ ಆಗಿದೆ ಎಂದು ಹೇಳಲಾಗಿದೆ.ಯಾಕೆಂದರೆ ಈ ಪತ್ರವು ಕಾಂಗ್ರೆಸ್ ಹೈಕಮಾಂಡ್ ವೈಫಲ್ಯವನ್ನೇ ಎತ್ತಿತೋರುವಂತಿದ್ದು, ಆರೋಪಪಟ್ಟಿಯಂತಿದೆ. ಅಲ್ಲದೆ ರಾಹುಲ್ ಗಾಂಧಿಯ ಕಾರ್ಯವೈಖರಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸುವ ರೀತಿಯಲ್ಲಿದೆ ಎಂಬುದು ಹೈಕಮಾಂಡ್ ಅಸಮಾಧಾನಕ್ಕೆ ಕಾರಣವೆನ್ನಲಾಗಿದೆ.
ಅಚ್ಚರಿ ಎಂದರೆ ಒಂದು ಕಾಲದಲ್ಲಿ ಗಾಂಧಿಕುಟುಂಬ ನಿಷ್ಠರೆಂದು ಗುರುತಿಸಿಕೊಂಡ ನಾಯಕರು ಅದರಲ್ಲೂ ಮಾಡಿ ಮುಖ್ಯಮಂತ್ರಿಗಳು, ಸಚಿವರು ಈ ಪತ್ರಕ್ಕೆ ಸಹಿ ಮಾಡಿರುವುದು ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಬೊಟ್ಟು ಮಾಡುತ್ತಿದೆ .ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಆನಂದ್ ಶರ್ಮ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ಜಿತಿನ್ ಪ್ರಸಾದ್, ವೀರಪ್ಪ ಮೊಯ್ಲಿ, ಸಂದೀಪ್ ದೀಕ್ಷಿತ್, ಪ್ರಮೋದ್ ತಿವಾರಿ, ಪಿ ಜೆ ಕುರಿಯನ್ ಮತ್ತಿತರರು ಈ ಪತ್ರಕ್ಕೆ ಸಹಿಹಾಕಿದ್ದಾರೆನ್ನಲಾಗಿದೆ. ಈ ಪೈಕಿ ಕೆಲವು ನಾಯಕರು ಇತ್ತೀಚೆಗೆ ನೀಡಿದ ಹೇಳಿಕೆಗಳು ರಾಹುಲ್ ಗಾಂಧಿಯ ಹೇಳಿಕೆಗಳು, ಅವರ ಸಾಮರ್ಥ್ಯ ಬಗ್ಗೆ ಪರೋಕ್ಷವಾಗಿ ಅಪನಂಬಿಕೆ ವ್ಯಕ್ತಪಡಿಸುವ ರೀತಿಯಲ್ಲಿದ್ದುದು ಪಕ್ಷ ಹೈಕಮಾಂಡ್ಗೆ ಇಷ್ಟವಾಗದಿರಲು ಕಾರಣವೆನ್ನಲಾಗಿದೆ.
ಆದರೆ ಈ ಪತ್ರದ ಬಗ್ಗೆ ಪಕ್ಷದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಈ ಪತ್ರ ರಾಹುಲ್ ವಿರುದ್ಧವಾಗಿಲ್ಲ.ಬದಲಿಗೆ ಪಕ್ಷ ಸಾಗಬೇಕಾದ ದಾರಿಯ ಬಗ್ಗೆ ಬರೆದುದಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ಮತ್ತೆ ಪಕ್ಷಾಧ್ಯಕ್ಷರಾದರೆ ತಾನು ಹರ್ಷದಿಂದಲೇ ಒಪ್ಪಿಕೊಳ್ಳುವೆ ಎಂಬುದಾಗಿ ನಾಯಕರೊಬ್ಬರು ಸಮಜಾಯಿಷಿ ನೀಡಿರುವುದು ಪತ್ರ ವಿವಾದಕ್ಕೆ ಇಂಬು ನೀಡಿದೆ. ಆದಾಗ್ಯೂ ರಾಹುಲ್ ಗಾಂಧಿ ಪಕ್ಷದ ಕೆಲವು ಅಂಗಸಂಸ್ಥೆಗಳಿಗೆ ಮಾಡಿದ ನೇಮಕಾತಿಗಳ ಬಗೆಗೂ ಈ ಪತ್ರದಲ್ಲಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಲಾಗಿದೆ.ಪಕ್ಷ ಯಾಕೆ ಕ್ಷೀಣಸ್ಥಿತಿಯತ್ತ ಹೋಗುತ್ತಿದೆ ಎಂಬ ಬಗ್ಗೆ ಈಗಲೂ ಪಕ್ಷದಲ್ಲಿ ಪ್ರಾಮಾಣಿಕ ಆತ್ಮಾವಲೋಕನ ನಡೆಯುತ್ತಿಲ್ಲ ಎಂಬ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಸೋಮವಾರ (ಇಂದು)ಬೆಳಿಗ್ಗೆ ೧೧ ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಈ ಸಭೆಯ ಬಗ್ಗೆ ಈಗ ಭಾರೀ ಕುತೂಹಲ ಮೂಡಿಸಿದೆ.ಈ ಹಿಂದೆ ವಯೋವೃದ್ಧ ದಲಿತ ನಾಯಕ ಸೀತಾರಾಮ ಕೇಸರಿ ಅವರನ್ನು ಪಕ್ಷಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಸೋನಿಯಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ವಿಧಾನ ಪಕ್ಷದ ವರ್ಚಸ್ಸಿಗೆ ತೀವ್ರ ಹಾನಿಯನ್ನುಂಟು ಮಾಡಿದ್ದು, ಈ ಹಿನ್ನೆಲೆಯಲ್ಲೇ ಸಿಡಬ್ಲ್ಯೂಸಿ ಚುನಾವಣೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕೆಂಬ ಕೂಗು ಕೇಳಿಬಂದಿದೆ ಎನ್ನಲಾಗಿದೆ.
ಈ ನಡುವೆ ರಾಹುಲ್ ಗಾಂಧಿಗೆ ನಿಕಟವಾಗಿರುವ ಗುಂಪೊಂದು ಅವರನ್ನೇ ಮತ್ತೆ ಪಕ್ಷಾಧ್ಯಕ್ಷರನ್ನಾಗಿಸಬೇಕೆಂಬುದಾಗಿ ಒತ್ತಡ ಹೇರುತ್ತಿದ್ದು, ಇತ್ತೀಚೆಗೆ ಚೀನಾ ಆಕ್ರಮಣ, ಕೊರೋನಾ ಬಿಕ್ಕಟ್ಟು ಸಂದರ್ಭಗಳಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ನೀಡುತ್ತಿದ್ದ ಹೇಳಿಕೆಗಳು ಅವರನ್ನು ಮತ್ತೆ ‘ಫಾರ್ಮ್’ಗೆ ತರುವ ಕಸರತ್ತಿನ ಭಾಗವೆಂದು ಹೇಳಲಾಗಿದೆ. ಆದರೆ ರಾಹುಲ್ ಅವರು ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಹಿತಾಸಕ್ತಿ ವಿರುದ್ಧವೇ ಮಾಡುತ್ತಿದ್ದ ರೀತಿಯ ಟೀಕೆಗಳು ಪಕ್ಷಕ್ಕೆ ಮತ್ತಷ್ಟು ಹಾನಿಯುಂಟು ಮಾಡಿವೆ ಎಂಬುದಾಗಿ ಹಲವು ಹಿರಿಯ ನಾಯಕರು ಭಾವಿಸಿರುವುದಾಗಿಯೂ ಮೂಲಗಳು ತಿಳಿಸಿವೆ.