ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರು ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ ಆದ್ದರಿಂದ ಎಲ್ಲಾ ವಾರ್ಡ್ನ ನೋಡಲ್ ಅಧಿಕಾರಿಗಳು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮಾಸ್ಕ್, ಸಾಮಾಜಿಕ ಅಂತರ ಸ್ವಚ್ಚತೆಯ ಬಗ್ಗೆ ಪರಿಶೀಲನೆ ಮಾಡಬೇಕು ಹಾಗೂ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.
ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಷ್ಟು ದಿನ ಕೇವಲ ನಗರಗಳಿಗೆ ಸೀಮಿತವಾಗಿದ್ದ ಕೊರೊನಾ ಈಗ ಹಳ್ಳಿಗಳಿಗೆ ಲಗ್ಗೆ ಇಟ್ಟಿದ್ದು ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸ್ವಚ್ಚತೆಯನ್ನು ಕಾಪಾಡಬೇಕು. ನಗರ ಅಥವಾ ಗ್ರಾಮೀಣ ಬಾಗದಲ್ಲಿ ಯಾವುದಾರೂ ಕೊರೊನಾ ಪ್ರಕರಣ ದೃಡಪಟ್ಟಲ್ಲಿ ನೋಡಲ್ ಅಧಿಕಾರಿಗಳು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ನೋಡಲ್ ಅಧಿಕಾರಿಗಳು ಕೊರೊನಾ ಸರಪಳಿ ಕಡಿತಗೊಳಿಸಲು ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು ಕೊರೊನಾ ಪ್ರಕರಣ ದೃಡಪಟ್ಟ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು. 65 ವರ್ಷ ಮೇಲ್ಪಟ್ಟ ಹಿರಿಯರಿಗೆ, ಗರ್ಭಿಣಿ ಸ್ತ್ರೀಯರಿಗೆ, ಕ್ಯಾನ್ಸರ್, ಆಸ್ತಮಾ ರೋಗಿಗಳಿಗೆ ಕೊರೊನಾ ಸೊಂಕು ತಗಲದಂತೆ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಜನರು ಹೊರಗೆ ಬರುತ್ತಿರುವುದು ಕಂಡುಬಂದಿದ್ದು ಈಗಾಗಲೇ 9 ಜನರ ಪ್ರಕರಣ ದಾಖಲಿಸಲಾಗಿದೆ, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸಾವು ಆಗದಂತೆ ಎಚ್ಚರ ವಹಿಸಬೇಕು ಹಾಗೂ ಅಂಗಡಿ ಮಾಲೀಕರು ಕೊರೊನಾ ಜಾಗೃತಿ ಮೂಡಿಸುವ ಬ್ಯಾನರ್ರನ್ನು ಅಂಗಡಿಯ ಮುಂದೆ ಅಳವಡಿಸಬೇಕು, ಹೋಟಲ್, ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳ ಮುಂದೆ ಸ್ವಚ್ಚತೆ ಇಲ್ಲವೆಂದರೆ ಕಾನೂನು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಮಾಜಿಕ ಅಂತರ, ಮುಖಗವಸು (ಮಾಸ್ಕ್) ಧರಿಸುವ ಮೂಲಕ ಶೇ.95 ರಷ್ಟು ಕೊರೊನಾ ನಿಯಂತ್ರಸಲು ಸಾಧ್ಯವಾಗುತ್ತದೆ ಇದರ ಜೊತೆಗೆ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ಕ್ವಾರಂಟೈನ್ ಸೆಂಟರ್ಗಳಲ್ಲಿ ಎಲ್ಲಾ ವ್ಯಸ್ಥೆಗಳು ಸರಿಯಾಗಿದಿಯೇ ಎಂಬುದರ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಟೀ ಅಂಗಡಿಗಳು ಸೇರಿದಂತೆ ಇನ್ನಿತರೆ ಜಾಗಗಳಲ್ಲಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕೊರೊನಾ ಮುಂಜಾಗ್ರಾ ಕ್ರಮಗಳನ್ನು ಕೈಗೊಳ್ಳದಿದ್ದರೆ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕರು ಹಾಗೂ ಗೌರಿಬಿದನೂರು ತಾಲ್ಲೂಕಿನ ಕೋವಿಡ್-19 ನೋಡಲ್ ಆಧಿಕಾರಿ ತೇಜ್ ಆನಂದರೆಡ್ಡಿ, ತಹಶೀಲ್ದಾರ್ ರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ನಗರಸಭೆ ಆಯುಕ್ತ ಚಲಪತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.