Saturday, June 25, 2022

Latest Posts

ಸಾರ್ವಜನಿಕರ ಕೆಲಸ ಕಾಲ ಮಿತಿಯಲ್ಲಿ ಮುಗಿಸಿ: ಅಧಿಕಾರಿಗಳಿಗೆ ಸಚಿವ ಬೈರತಿ ಬಸವರಾಜ್ ಸೂಚನೆ

 ಹೊಸ ದಿಗಂತ ವರದಿ, ಮಡಿಕೇರಿ:

ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರು ಪೂರೈಸಬೇಕಿದ್ದು, ನಗರ, ಪಟ್ಟಣ ಪ್ರದೇಶದ ಜನರಿಗೆ ಕನಿಷ್ಟ ಮೂಲ ಸೌಲಭ್ಯವನ್ನಾದರೂ ಒದಗಿಸಬೇಕು ಅಲ್ಲದೆ ಸಾರ್ವಜನಿಕರ ಕೆಲಸವನ್ನು ಕಾಲ ಮಿತಿಯಲ್ಲಿ ಮುಗಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಎ.ಬಸವರಾಜ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಡಿಕೇರಿ ನಗರದಲ್ಲಿ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಕೂಡಲೇ ಜಾಗ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಡಿಕೇರಿ ನಗರದಲ್ಲಿ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ 50 ಕೋಟಿ ರೂ. ಹಣವಿದೆ. ಆದರೆ ಇದುವರೆಗೆ ಜಾಗ ಗುರುತಿಸದೆ ಹಣ ಸದ್ಬಳಕೆಯಾಗಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರ ಜಾಗ ಗುರುತಿಸಬೇಕು. ಮುಂದಿನ ಅಧಿವೇಶನ ನಂತರ ಕೊಡಗು ಜಿಲ್ಲೆಗೆ ತಾನು ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೊಸ ತಂತ್ರಜ್ಞಾನ ಅಳವಡಿಸಿ : ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದರೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ಕೇಳಿ ಬರುತ್ತದೆ. ಆದ್ದರಿಂದ ಕುಡಿಯುವ ನೀರಿನ ಮೂಲವನ್ನು ಸಂರಕ್ಷಿಸಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವುದರಿಂದ ಹೊಸ ತಂತ್ರಜ್ಞಾನ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು. ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದೂ ನಗರಾಭಿವೃದ್ಧಿ ಸಚಿವರು ನಿರ್ದೇಶನ ನೀಡಿದರು.

ವ್ಯತ್ಯಯವಾಗಬಾರದು
ನಗರ, ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಹಳೆಯ ಪೈಪು ಮತ್ತು ಮೋಟಾರುಗಳನ್ನು ಬದಲಿಸಿ ಕುಡಿಯುವ ನೀರು ಪೂರೈಸಬೇಕು ಎಂದು ಸಚಿವರು ಸೂಚಿಸಿದರು.
ಮಡಿಕೇರಿ ನಗರ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಬೆಟ್ಟಗುಡ್ಡ ಪ್ರದೇಶವಾಗಿರುವುದರಿಂದ ನಾಗರಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಬೇಕೆಂದು ಅವರು ಸಲಹೆ ಮಾಡಿದರು.

ವರದಿ ಸಲ್ಲಿಸಲು ಸೂಚನೆ 
ಸೋಮವಾರಪೇಟೆಯಲ್ಲಿ ಪೈಪುಲೈನ್ ಅಳವಡಿಕೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಮುಖ್ಯಾಧಿಕಾರಿಗೆ ಅವರು ನಿರ್ದೇಶನ ನೀಡಿದರು.
ಮಡಿಕೇರಿ ನಗರ ಮತ್ತು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಡಾವಣೆ ಅಭಿವೃದ್ಧಿ ಸಂಬಂಧಿಸಿದಂತೆ 50:50 ಅನುಪಾತದಲ್ಲಿ ಭೂಮಿ ನೀಡಲು ಮುಂದೆ ಬರುವವರನ್ನು ಪತ್ತೆ ಹಚ್ಚಿ ಬಡಾವಣೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಬೈರತಿ ಬಸವರಾಜ್ ಸಲಹೆ ಮಾಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು, ನಗರಾಭಿವೃದ್ಧಿ ಇಲಾಖೆಯಿಂದ ಒದಗಿಸುವ ನಿವೇಶನದ ದರಕ್ಕಿಂತ ಖಾಸಗಿ ಬಡಾವಣೆಗಳಲ್ಲಿ ದರ ಕಡಿಮೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ಅಷ್ಟಾಗಿ ಯಶಸ್ಸು ಕಾಣುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಕುಶಾಲನಗರದಲ್ಲಿ ಮಳೆಗಾಲದ ಅವಧಿಯಲ್ಲಿ ಪ್ರವಾಹ ಉಂಟಾಗಿ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಹೂಳು ತೆಗೆಯುವಂತಾಗಬೇಕು. ಆ ನಿಟ್ಟಿನಲ್ಲಿ ನಗರ/ ಪಟ್ಟಣ ವ್ಯಾಪ್ತಿಯ ಜಾಗವನ್ನು ಗುರುತಿಸಬೇಕಿದೆ ಎಂದು ಸಚಿವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕುಶಾಲನಗರ ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶೇ.50 ರಷ್ಟು ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಆದ್ದರಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ವಿಧಾನ ಪರಿಷತ್ತಿನಲ್ಲಿ ಮಡಿಕೇರಿ ನಗರ ಮತ್ತು ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಗಮನ ಸೆಳೆದ ಹಿನ್ನೆಲೆಯಲ್ಲಿ ಸಚಿವರು ಕೊಡಗು ಜಿಲ್ಲೆಗೆ ಖುದ್ದು ಭೇಟಿ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ, ಮಡಿಕೇರಿ ಮತ್ತು ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ನಗರಾಭಿವೃದ್ಧಿ ವ್ಯಾಪ್ತಿಗೆ ಸಂಬಂಧಿಸಿದಂತೆ ಇನ್ನಷ್ಟು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಮಾತನಾಡಿ ಮೂಡಾದಿಂದ ಇದುವರೆಗೆ ಯಾವುದೇ ಬಡಾವಣೆ ಅಭಿವೃದ್ಧಿಪಡಿಸಿಲ್ಲ ಎಂದು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾದ ಸಿದ್ದನಾಯಕ ಅವರ ವಿವಿಧ ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರಲ್ಲದೆ, ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಜಾಗ ಒದಗಿಸಬೇಕಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ, ಒಳಚರಂಡಿ ಯೋಜನೆ, ವೀರಾಜಪೇಟೆ ಮತ್ತು ಸೋಮವಾಪೇಟೆ ಪಂ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ ಸಂಬಂಧಿಸಿದಂತೆ ಅವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಜು, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ರಾಜ್ ಗೋಪಾಲ್, ಎಇಇ ಅಜಯ್, ನಗರಾಭಿವೃದ್ಧಿ ಕೋಶದ ಎಇಇ ನಾಗರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀಧರ, ನಾಚಪ್ಪ, ಸುಜಯ್ ಕುಮಾರ್, ನಗರಾಭಿವೃದ್ಧಿ ಯೋಜನಾ ಶಾಖೆಯ ಸಹಾಯಕ ನಿರ್ದೇಶಕಿ ಲಾವಣ್ಯ ಮತ್ತಿತರರು ತಮ್ಮ ನಗರದ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss