ಮಾಗಡಿ : ಸಾರ್ವಜನಿಕರ ರಕ್ಷಣೆಯಲ್ಲಿ ಸದಾ ನಮ್ಮೊಂದಿಗೆ ಇರುವ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬೆಂಗಳೂರು ಒಳಚರಂಡಿ ಮಂಡಳಿ ಮಾಜಿ ನಿರ್ದೆಶಕ ಹರೀಶ್ ಗೌಡ ಹೇಳಿದರು.
ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಪೀಣ್ಯ ಪೊಲೀಸ್ ಠಾಣೆ ಸಿಪಿಐ ಬಿ.ರಾಜು ಅವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳವಾರ ಅವರನ್ನು ಅಭಿನಂದಿಸಿ ಮಾತನಾಡಿ, ನಾಗರೀಕರ ಹಿತ, ರಕ್ಷಣೆ, ಸಮಾಜದ ಶಾಂತಿ ಕಾಪಾಡುವ ಪೊಲೀಸರು ಸಹ ಯೋಧರಂತೆ, ಕರೋನಾ ಪ್ರಾರಂಭದಿಂದಲ್ಲೂ ಅವರ ಪ್ರಾಣವನ್ನು ಲೆಕ್ಕಿಸದೆ ರಾತ್ರಿ,ಹಗಲು ಎನ್ನದೆ ನಿರಂತರವಾಗಿ ಕಾರ್ಯನಿರ್ವಹಿಸುವ ಮೂಲಕ ನಾಗರೀಕರ ಆರೋಗ್ಯ ಕಾಪಾಡಿದ್ದಾರೆ ಅದರಂತೆ ಸಿಪಿಐ ಬಿ.ರಾಜು ಸಹ ಪೀಣ್ಯ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಕರೋನಾ ವೇಳೆ ಸಂಕಷ್ಟದಲ್ಲಿದ್ದು ನೂರಾರು ಮಂದಿ ಬಡವರು, ಕೂಲಿಕಾರ್ಮಿಕರುಗಳಿಗೆ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.
ಹಿರಿಯ ಸಾಹಿತಿ ಎಂ.ಎಂ. ಕಲಬುರ್ಗಿ, ಸಾಹಿತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳನ್ನು ಬೇದಿಸಲು ಸರಕಾರ ನೇಮಿಸಿದ ತಂಡದಲ್ಲಿದ್ದು ಆರೋಪಿಗಳನ್ನು ಬೇದಿಸಿದ ಹಿನ್ನಲೆಯಲ್ಲಿ ಸರಕಾರ ಸಿಪಿಐ ಬಿ.ರಾಜುಗೆ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ಖುಷಿಯಾಗಿದೆ ಎಂದರು.
ತಾಲೂಕು ರೈತಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಸಿಪಿಐ ಬಿ.ರಾಜು ಅವರು ವಿದ್ಯಾಬ್ಯಾಸದ ವೇಳೆಯೆ ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಘಟನೆಗಳ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಿಗೆ ತಿಳಿಸಿ ಕಾನೂನು ಬಾಹಿರ ಘಟನೆಗೆ ಬ್ರೇಕ್ ಹಾಕಿ ಅಂದಿನಿಂದಲ್ಲೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಸ್ಪೂರ್ಥಿ ಹೊಂದು ಉನ್ನತ ಶಿಕ್ಷಣ ಪಡೆದು ಧಕ್ಷ ಪ್ರಮಾಣಿಕ ಪೋಲೀಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವುದು ಸ್ವಾಗತಾರ್ಹ ಎಂದರು.