Wednesday, July 6, 2022

Latest Posts

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ವ್ಯಕ್ತಿಗಳಿಂದಲೇ ಅದನ್ನು ತೆಗೆಸಿ ಶುಚಿ ಮಾಡಿಸಿದ ಗ್ರಾಮಸ್ಥರು!

ಮಡಿಕೇರಿ: ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ವ್ಯಕ್ತಿಗಳಿಂದಲೇ ಅದನ್ನು ತೆಗೆಸಿ ಸ್ವಚ್ಛ ಮಾಡಿಸಿದ ಘಟನೆ ಕತ್ತಲೆಕಾಡು ಗ್ರಾಮದಲ್ಲಿ ನಡೆದಿದೆ.
ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತಲೆಕಾಡು ಗ್ರಾಮದ ವ್ಯೂ ಪಾಯಿಂಟ್ ಬಳಿ ಎರಡು ಪ್ರತ್ಯೇಕ ಸ್ಥಳದಲ್ಲಿ   ರಾತ್ರಿ ಲೋಡ್‍ಗಟ್ಟಲೆ ತ್ಯಾಜ್ಯ ವಿಲೇವಾರಿ ಮಾಡಲಾಗಿತ್ತು.
ಬೆಳಗ್ಗೆ ಇದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ  ತ್ಯಾಜ್ಯ ಸುರಿದವರಾರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಇದೇ ಸಂದರ್ಭ ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಸ್ಥಳದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸುರಿದಿದ್ದ ತ್ಯಾಜ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಗ್ಯಾರೇಜ್‍ಗೆ ಸಂಬಂಧಿಸಿದ ತ್ಯಾಜ್ಯ ಎಂಬುದು ಗಮನಕ್ಕೆ ಬಂದಿದೆ.
ಮರಗೋಡುವಿನ ಕಿಶೋರ್ ಎಂಬವರಿಗೆ ಸೇರಿದ ಗ್ಯಾರೇಜ್‍ನ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗಿದೆ ಎಂಬ ಮಾಹಿತಿಯನ್ನು ಅಲ್ಲಿನ ಕೆಲವರು ಕತ್ತಲೆಕಾಡು ಭಾಗದ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಮರಗೋಡುವಿಗೆ ತೆರಳಿ ಪರಿಶೀಲನೆಗೆ ಮುಂದಾಗಬೇಕೆನ್ನುವಷ್ಟರಲ್ಲಿ ತ್ಯಾಜ್ಯ ಹಾಕಿದ್ದ  ಮರಗೋಡುವಿನ ಸಿದ್ದಾಪುರ ರಸ್ತೆಯಲ್ಲಿರುವ ಮಂಜುನಾಥ ಆಟೋ ವಕ್ರ್ಸ್‍ಗೆ ಸೇರಿದ ತ್ಯಾಜ್ಯವನ್ನು ಇಲ್ಲಿ ಸುರಿದಿರುವ ಬಗ್ಗೆ ಮಾಲಕ ಕಿಶೋರ್ ತಪ್ಪೊಪ್ಪಿಕೊಂಡಿದ್ದಾರೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ವರ್ಕ್‍ಶಾಪ್ ಸ್ವಚ್ಛ ಮಾಡಿ, ತ್ಯಾಜ್ಯವನ್ನು ಬೇರೆಡೆ ವಿಲೇವಾರಿ ಮಾಡಲು ಕೆಲಸದವರಿಗೆ ಹೇಳಲಾಗಿತ್ತು. ಆದರೆ ಅವರು ಇಲ್ಲಿ ತಂದು ಸುರಿದಿದ್ದಾರೆ ಎಂದು ಗ್ರಾಮಸ್ಥರೆದುರು ಕ್ಷಮೆ ಕೋರಿದ ಪ್ರಸಂಗವೂ ನಡೆಯಿತು.
ಎರಡು ಪ್ರತ್ಯೇಕ ಸ್ಥಳದಲ್ಲಿ ಸುರಿಯಲಾಗಿದ್ದ ಕಸವನ್ನು ಅವರಿಂದಲೇ ತೆಗೆಸಿದ ಗ್ರಾಮಸ್ಥರು, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಡಿಕೇರಿ ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ ಮೇರೆಗೆ ಅಪರಾಧ ವಿಭಾಗದ ಎಸ್‍ಐ ಶಿವನಗೌಡ ಪಾಟೀಲ್, ಎಎಸ್‍ಐ ಮಾಚಯ್ಯ ಆಗಮಿಸಿ ಪರಿಶೀಲನೆ ನಡೆಸಿದರು. ಲೋಡ್ ಮಾಡಿದ ಕಸವನ್ನು ತಮ್ಮ ಸ್ಥಳದಲ್ಲೇ ವಿಲೇವಾರಿ ಮಾಡುವುದಾಗಿ ಹೇಳಿದ ಕಿಶೋರ್ ಲಾರಿಯನ್ನು ಗ್ಯಾರೇಜ್‍ನ ಬಳಿ ನಿಲ್ಲಿಸಿದ್ದು, ಅದನ್ನು ಗುಂಡಿ ತೆಗೆದು ಹೂತು ಹಾಕುವುದು ಅಥವಾ ಸುಟ್ಟು ಹಾಕದಂತೆ ಮರಗೋಡು ಪಂಚಾಯಿತಿ ಎಚ್ಚರಿಕೆ ನೀಡಿದೆ. ಅಲ್ಲದೆ ಕಸವನ್ನು ವಿಂಗಡನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮರಗೋಡು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಂಜನ ಮೂರ್ತಿ ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತ್ಯಾಜ್ಯವನ್ನು ಲಾರಿಯಲ್ಲಿ ತಂದು ಗ್ಯಾರೇಜ್‍ನಲ್ಲಿ ನಿಲ್ಲಿಸಿದ್ದಾರೆ. ಅದನ್ನು ಬೇರೆ ಕಡೆ ವಿಲೇವಾರಿ ಮಾಡದಂತೆ ಸೂಚಿಸಿದ್ದೇನೆ. ಸುಡುವುದಾಗಲಿ, ಮಣ್ಣಿನಡಿ ಹೂತು ಹಾಕುವುದಾಗಲಿ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ತ್ಯಾಜ್ಯ ಮರುವಿಂಗಡಣೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪಂಚಾಯಿತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss