ಮಂಗಳೂರು: ಸಾರ್ವಜನಿಕ ಸ್ಥಳ, ಕೆಲಸದ ಸ್ಥಳ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 200 ರೂ., ಇತರ ಕಡೆ 100 ರೂ. ದಂಡ ಬೀಳಲಿದೆ. ಬೃಹತ್ ಸಾರ್ವಜನಿಕ ಸಭೆ, ಒಟ್ಟುಗೂಡುವಿಕೆಯ ನಿಷೇಧ ಮುಂದುವರೆಯಲಿದೆ. ಮದುವೆಯಲ್ಲಿ 50 ಮಂದಿ, ಶವಸಂಸ್ಕಾರದಲ್ಲಿ 20 ಮಂದಿ ಮಾತ್ರ ಭಾಗವಹಿಸಬಹುದು. ಸಾರ್ವಜನಿಕ ಸ್ಥಳದಲ್ಲಿ ಉಗಿಯುವುದಕ್ಕೆ ನಿಷೇಧವಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಬಳಕೆ ನಿಷೇಧಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಧ್ಯವಾದಷ್ಟು ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡಬೇಕು, ಕಚೇರಿ, ಅಂಗಡಿಗಳಲ್ಲಿ ಕೆಲಸದಲ್ಲಿ ಪಾಳಿ ಪದ್ಧತಿ ಅನುಸರಿಸಬೇಕು, ಥರ್ಮಲ್ ಸ್ಕ್ರೀನಿಂಗ್, ಕೈ ತೊಳೆಯುವುದು, ಸ್ಯಾನಿಟೈಸರ್ಬಳಸಬೇಕು, ಕೆಲಸದ ಆವರಣವನ್ನು ಆಗಾಗ್ಗೆ ಸಾನಿಟೈಸೇಷನ್ಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾಸ್ಕ್, ಅಂತರ ಇಲ್ಲದಿದ್ದರೆ ದಂಡ ಖಚಿತ
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಪರಿಶೀಲನೆ ನಡೆಸಲು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ೬೦ ವಾರ್ಡ್ಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ, ನೋಟಿಸ್ ನೀಡಲು ಸೂಚಿಸಿದ್ದಾರೆ.
ಮಾಲ್, ಕಾಂಪ್ಲೆಕ್ಸ್, ಅಂಗಡಿ, ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಅತ್ಯ. ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಿ ಕೋವಿಡ್ ಮಾಹಿತಿ ಅಭಿಯಾನ ನಡೆಸಲು ಡಿಸಿ ಸೂಚಿಸಿದ್ದಾರೆ.