ಉಡುಪಿ: ಮೈಸೂರು ಮೂಲದ ಉದ್ಯಮಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಅರಾಟೆ ಎಂಬಲ್ಲಿ ನಡೆದಿದೆ.
ಮೈಸೂರಿನ ಮಧು ಎಂ.ಪಿ. (40) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಇವರು ನೆಲಮಂಗಲ ಎಂಬಲ್ಲಿರುವ ಡಿಸೇಲ್ ಬಂಕ್ನ್ನು ಐದು ವರ್ಷ ಅವಧಿಗೆ ಗುತ್ತಿಗೆಗೆ ಪಡೆದು ವ್ಯವಹಾರ ನಡೆಸುತ್ತಿದ್ದರು. ಅ.28ರಂದು ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ಕಾರಿನಲ್ಲಿ ಹೊರಟಿದ್ದವರು, ಕಾರ್ಕಳ- ಉಡುಪಿ ಮಾರ್ಗವಾಗಿ ಕುಂದಾಪುರ ಬಂದು ಹೊಸಾಡು ಗ್ರಾಮದ ಅರಾಟೆ ಸೇತುವೆ ಸಮೀಪ ಕಾರನ್ನು ನಿಲ್ಲಿಸಿ, ಸೇತುವೆ ಮೇಲಿನಿಂದ ಸೌಪರ್ಣಿಕಾ ನದಿಗೆ ಹಾರಿರುವ ಶಂಕೆ ಇದೆ. ಇವರ ಮೃತದೇಹ ಸೇನಾಪುರ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಗುರುವಾರ ಪತ್ತೆಯಾಗಿದೆ. ಅರಾಟೆ ಸೇತುವೆ ಸಮೀಪ ನಿಲ್ಲಿಸಲಾಗಿದ್ದ ಅಪರಿಚಿತ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಮೊಬೈಲ್ ಮೂಲಕ ಮಧು ಗುರುತು ಪತ್ತೆ ಹಚ್ಚಲಾಗಿದೆ.
ಮಧು ಅವರು ತಮ್ಮ ಉದ್ಯಮದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ನ್ನು ಸಾಲವಾಗಿ ಇತರರಿಗೆ ನೀಡಿದ್ದು, ಬಾಕಿ ಹಣ ಮರಳಿ ಬಾರದೆ ಇರುವುದರಿಂದ ಮಾನಸಿಕವಾಗಿ ನೊಂದಿದ್ದರು. ವ್ಯವಹಾರದಲ್ಲಿನ ಆರ್ಥಿಕ ಅಡಚಣೆಯಿಂದಲೇ ಅವರು ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.
ಮಧು ಅವರಿಗೆ ಪತ್ನಿ ಹಾಗೂ 15 ವರ್ಷದ ಮಗನಿದ್ದಾನೆ. ಶುಕ್ರವಾರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.