Wednesday, June 29, 2022

Latest Posts

ಸಾವಯವ ಗೊಬ್ಬರ ಸಿದ್ಧಪಡಿಸಿ ಜನತೆಗೆ ಮಾದರಿಯಾದ ಪುರಸಭೆ

ಬಂಟ್ವಾಳ: ಅಂಗಡಿ, ಮನೆಗಳಲ್ಲಿ ಸಿಗುತ್ತಿದ್ದ ತರಕಾರಿ ತ್ಯಾಜ್ಯ, ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಟ್ವಾಳ ಪುರಸಭೆಯ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದೆ.

ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಆಸಕ್ತಿಯಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಪುರಸಭೆಯ ಕಚೇರಿ ಹಿಂಬದಿಯಲ್ಲಿರುವ ಖಾಲಿ ಜಾಗದಲ್ಲಿ ಆರಂಭಿಸಲಾದ ಗೊಬ್ಬರ ಘಟಕದಲ್ಲಿ ಇದೀಗ ಸಾವಯವ ಗೊಬ್ಬರ ಬಳಕೆಗೆ ಸಿದ್ದವಾಗಿದೆ.

ಬಂಟ್ವಾಳ ಪುರಸಭೆಯ ಕಸದ ಸಮಸ್ಯೆಗೆ ಮುಕ್ತಿ ನೀಡುವ ಹಾಗೂ ಮಂಗಳೂರಿಗೆ ಸಾಗಾಟವಾಗುವ ಇಲ್ಲಿನ ಕಸದ ಹೊರೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಅವರ ಮಾರ್ಗದರ್ಶನದಲ್ಲಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಯತ್ನ ಕಳೆದ ಒಂದೂವರೆ ತಿಂಗಳ ಹಿಂದೆ ಆರಂಭಿಸಲಾಗಿತ್ತು. ಪರಿಸರ ಇಂಜಿನಿಯರ್ ಯಾಸ್ಮೀನ್ ಹಾಗೂ ಅವರ ಸಹಾಯಕ ಇಕ್ಬಾಲ್ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಪುರಸಭಾ ಕಾರ್ಯಲಯದ ಹಿಂಭಾಗದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿದ್ದರು. ಪುರಸಭಾ ವ್ಯಾಪ್ತಿಯ ಅಂಗಡಿಗಳಲ್ಲಿ ಸಿಗುತ್ತಿದ್ದ ತರಕಾರಿ, ಹಣ್ಣುಗಳನ್ನು ಸಣ್ಣದಾಗಿ ಕೊಚ್ಚಿ ಗೊಬ್ಬರ ತಯಾರಿಯನ್ನು ಶುರುಮಾಡಿದ್ದರು. ಈಗಾಗಲೇ ಮೂರು ಪ್ರತ್ಯೇಕ ಘಟಕಗಳನ್ನು ಮಾಡಿಕೊಂಡು ಗೊಬ್ಬರ ತಯಾರಿ ನಡೆಯುತ್ತಿದ್ದು ಈ ಪೈಕಿ ಆರಂಭದ ಘಟಕದಲ್ಲಿ ಸಾವಯವ ಗೊಬ್ಬರ ಸಿದ್ಧಗೊಂಡಿದೆ. ಪುರಸಭೆಯ ಸಾಮೂಹಿಕ ಈ ಪ್ರಯತ್ನಕ್ಕೆ ಆರಂಭಿಕವಾದ ಯಶಸ್ಸು ಸಿಕ್ಕಿದೆ.

ಈಗಾಗಲೇ ಸಾಕಷ್ಟು ಮಂದಿ ಹಸಿ ಕಸದ ಗೊಬ್ಬರ ತಯಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಮುಖ್ಯಾಧಿಕಾರಿಯವರಿಂದ ಮಾಹಿತಿ ಪಡೆದುಕೊಂಡಿದ್ದರೆ, ಇನ್ನೂ ಅನೇಕರು ಗೊಬ್ಬರ ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಎರೆಹುಳ ಗೊಬ್ಬರ ಘಟಕ ಆರಂಭ

ಸಾವಯವ ಗೊಬ್ಬರ ತಯಾರಿ ಪ್ರಯೋಗ ಯಶಸ್ಸು ಕಾಣುತ್ತಿರುವಂತೆಯೇ ಅದರ ಪಕ್ಕದಲ್ಲೇ ಎರೆಹುಳ ಗೊಬ್ಬರ ತಯಾರಿ ಘಟಕವನ್ನು ಆರಂಭಿಸಲಾಗಿದೆ. ಅದಕ್ಕೆ ಬೇಕಾದ 9 ಅಡಿ ಉದ್ದ 3.5 ಅಡಿ ಅಗಲದ ಕೃತಕ ತೊಟ್ಟಿಯನ್ನು ರಚಿಸಿ ಹಸಿಕಸ, ಹುಲ್ಲು, ತರಗೆಲೆ, ಸೆಗಣಿಯನ್ನು ತುಂಬಿಡಲಾಗಿದ್ದು ಕೆಲ ದಿನಗಳ ಬಳಿಕ ಎರೆಹುಳಗಳನ್ನು ಹಾಕಲಾಗುತ್ತಿದೆ.

ಮನೆಗಳಲ್ಲಿ ಆರಂಭಿಸಲು ಪ್ರೇರಣೆ: ಹಸಿ ಕಸದ ಗೊಬ್ಬರ ತೊಟ್ಟಿಗಳನ್ನು ಪುರಸಭಾ ವ್ಯಾಪ್ತಿಯ ನಾಗರಿಕರು ತಮ್ಮ ಮನೆ ವ್ಯಾಪ್ತಿಯಲ್ಲಿ ಸ್ಥಳವಕಾಶವಿದ್ದರೆ ಅಲ್ಲಿಯೇ ಆರಂಭಿಸಬಹುದು. ಇದರಿಂದ ಕಸ ವಿಲೇವಾರಿಯೂ ಸುಲಭವಾಗಿ ತ್ಯಾಜ್ಯದ ಸಮಸ್ಯೆ ಬಗೆಹರಿಯುತ್ತದೆ. ವಸತಿ ಸಂಕೀರ್ಣಗಳಲ್ಲಿ ಹಾಗೂ ಜಾಗದ ಕೊರತೆ ಇರುವ ಜನರು ಹಸಿ ಕಸವನ್ನು ಪ್ರತ್ಯೇಕವಾಗಿ ನೀಡಿದ್ದಲ್ಲಿ ಪುರಸಭೆಯೇ ಗೊಬ್ಬರ ತಯಾರಿ ಮಾಡುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದ್ದಾರೆ.

ಸ್ವಯಂ ಜಾಗೃತಿ ಅಗತ್ಯ

ಕಸ ವಿಲೇವಾರಿಗೆ ಬಂಟ್ವಾಳ ಪುರಸಭೆ ಸಾಕಷ್ಟು ಕ್ರಮಗಳನ್ನು ಕೈಗೊಂಡರು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಕಸ ಎಸೆಯುವ ಅಜ್ಞಾನಿಗಳಿಗೆ ಕಡಿವಾಣ ಬಿದ್ದಿಲ್ಲ. ಲಭ್ಯವಿರುವ ವ್ಯವಸ್ಥೆಯನ್ನು ಬಳಸಿಕೊಂಡು ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಸ ವಿಲೇವಾರಿಗೆ ಹಲವಾರು ಕ್ರಮಗಳನ್ನು ಕೈಗೊಂಡರೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೆಡೆ ಕಸದ ರಾಶಿಗಳು ಕಂಡು ಬರುತ್ತಿದೆ. ಆದರೂ ದೂರುಗಳು ಬಂದ ತಕ್ಷಣವೇ ಪುರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಜನರಲ್ಲಿ ಕಸ ಎಸೆಯಬಾರದೆನ್ನುವ ಸ್ವಯಂ ಜಾಗೃತಿ ಬಾರದೆ ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಸಾಧ್ಯವಿಲ್ಲ ಎನ್ನುವುದು ಪ್ರಜ್ಞಾವಂತರ ಅನಿಸಿಕೆ.

ಶಾಸಕರಿಂದ ಮೆಚ್ಚುಗೆ: ಪುರಸಭೆಯ ಈ ಪ್ರಯತ್ನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಈ ಹಿಂದೆ ಕಸದ ಸಮಸ್ಯೆ ವ್ಯಾಪಾಕವಾಗಿದ್ದು ಅದನ್ನು ನಿಭಾಯಿಸುವುದೇ ದೊಡ್ಡ ಸವಲಾಗಿತ್ತು. ಇದೀಗ ಪುರಸಭಾ ವ್ಯಾಪ್ತಿಯಲ್ಲಿ ಸಿಗುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಯೋಗ ಉತ್ತಮವಾಗಿದ್ದು, ಇದ್ದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದ್ದಾರೆ.

ಪುರವಾಸಿಗಳ ಸಹಕಾರ ಅಗತ್ಯ
ಹಸಿಕಸವನ್ನು ಸಾವಯವ ಗೊಬ್ಬರ ಮಾಡುವ ಪ್ರಾಯೋಗಿಕ ಪ್ರಯತ್ನ ಸಫಲವಾಗಿದ್ದು ಗೊಬ್ಬರ ಸಿದ್ದಗೊಂಡಿದೆ. ಪೌರಕಾರ್ಮಿಕರು ದಿನ ಪ್ರತಿ ಸಂಗ್ರಹಿಸಿ ತಂದ ಹಸಿ ಕಸ, ತರಕಾರಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಇದೀಗ ಮತ್ತೆ ಒಂದು ಹೆಜ್ಜೆ ಮುಂದು ಹೋಗಿ ಎರೆಹುಳ ಗೊಬ್ಬರ ತಯಾರಿ ಘಟಕವನ್ನು ಆರಂಭಿಸಿದ್ದೇವೆ. ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರ ಸಹಕಾರದಿಂದಾಗಿ ಇದು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೊಬ್ಬರ ತಯಾರಿಸುವ ಚಿಂತನೆ ಇದೆ. ಈ ಮೂಲಕ ಕಸದ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ನಡೆಯುತ್ತಿದ್ದು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ.
-ಲೀನಾ ಬ್ರಿಟ್ಟೊ, ಮುಖ್ಯಾಧಿಕಾರಿ ಪುರಸಭೆ ಬಂಟ್ವಾಳ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss