Thursday, June 30, 2022

Latest Posts

ಸಾವಿನ‌ ಮನೆ ಬಾಗಿಲು ಬಡಿದು ಬದುಕುಳಿದ ಹಸು!

ಅರಸೀಕೆರೆ: ಈ ತಾಲ್ಲೂಕಿನ ಗಂಡಸಿ ಹೋಬಳಿಯ ಶಿವಪುರ ಗ್ರಾಮದ ವಿಶ್ವನಾಥ್ ರವರ ಹಸುವು ತೈಲೇರಿಯಾ ಎಂಬ ಖಾಯಿಲೆಯಿಂದ ನರಳಿ ತೀವ್ರತರವಾದ ರಕ್ತದ ಕೊರತೆಯನ್ನು ಅನುಭವಿಸಿ ಕತ್ತನ್ನೂ ಎತ್ತಲಾರದೆ, ಉಸಿರಾಡಲೂ ಆಗದೆ ಸಾವು ಬದುಕಿನ‌ ನಡುವೆ ಹೋರಾಡುತ್ತಿತ್ತು. ಕಣ್ಣು ಮತ್ತು ಮಡಿಲುಗಳು ಬಿಳಿಹಾಳೆಯಂತೆ ಬೆಳ್ಳಗಾಗಿದ್ದವು.

ಸಾಮಾನ್ಯವಾಗಿ 13-15 ಗ್ರಾಂ/ ಡೆಸಿ ಲೀಟರ್ ಇರಬೇಕಾದ ರಕ್ತಾಂಶವಾದ ಹಿಮೋಗ್ಲೋಬಿನ್ ಕೇವಲ 1.8 ಗ್ರಾಂ/ ಡೆಸಿ ಲೀಟರ್ ನಷ್ಟಿತ್ತು. ಸಾಮಾನ್ಯವಾಗಿ 23-45 % ಇರಬೇಕದ ಪಿ.ಸಿ.ವಿ. ಯು ಕೇವಲ 7.5% ನಷ್ಟಕ್ಕೆ ಇಳಿದಿತ್ತು. ಈ ಮಟ್ಟಕ್ಕೆ ರಕ್ತದ ಕೊರತೆಯಾದ ಹಸುಗಳು ಬದುಕುಳಿಯುವುದು ಅತ್ಯಂತ ವಿರಳ. ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಪಶುಚಿಕಿತ್ಸಾಲಯದ ಪಶುವೈದ್ಯರಾದ ಡಾ. ಮಂಜುನಾಥ್ ಎಸ್.ಪಿ. ರವರು ಅದೇ ಮನೆಯ ಇನ್ನೊಂದು ಆರೋಗ್ಯವಂತ ಹಸುವಿನಿಂದ 4 ಲೀಟರ್ ರಕ್ತವನ್ನು ಸಂಗ್ರಹಿಸಿ ಖಾಯಿಲೆಯಿಂದ ನರಳುತ್ತಿದ್ದ ಹಸುವಿಗೆ ವರ್ಗಾಯಿಸಿದರು.

ಈಗ ಹಸುವು ಆರೋಗ್ಯದಿಂದಿದ್ದು ದಿನಕ್ಕೆ‌10 ಲೀಟರ್ ಹಾಲನ್ನು ಕೊಡುತ್ತಿದೆ. ಅತ್ಯಂತ ರಕ್ತಹೀನತೆಯಿಂದ ಸಾವಿನ‌ಮನೆಯ ಬಾಗಿಲನ್ನು ತಟ್ಟುತ್ತಿದ್ದ ಹಸುವಿಗೆ ರೈತರ ಮನೆಯ ಬಾಗಿಲಲ್ಲೇ ಅತೀ ಕಡಿಮೆ‌ ಖರ್ಚಿನಲ್ಲಿ ಇನ್ನೊಂದು ಹಸುವಿನ ರಕ್ತವನ್ನು ತೆಗೆದು ವರ್ಗಾಯಿಸಿ ಬದುಕುಳಿಸಿದನ್ನು ಕಂಡು ಗ್ರಾಮಸ್ಥರು ಪಶುವೈದ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಮಂಜುನಾಥ್ ಎಸ್. ಪಿ. ರವರು ” ಅತೀ ರಕ್ತ ಹೀನತೆಯಿಂದ ಬಳಲುತ್ತಿರುವ ಹಸುಗಳನ್ನು ರಕ್ತವರ್ಗಾವಣೆಯಿಂದ ಬದುಕಿಸಬಹುದಾಗಿದೆ. ಮನುಷ್ಯರಲ್ಲಿರುವಂತೆ ದನಗಳಿಗೆ ರಕ್ತ ಸಂಗ್ರಹಣಾ ಕೇಂದ್ರ ( ಬ್ಲಡ್ ಬ್ಯಾಂಕ್) ಗಳಿಲ್ಲ. ಆದರೆ, ಇರುವ ಪರಿಕರಗಳನ್ನೇ ಬಳಸಿ ರಕ್ತವರ್ಗಾವಣೆ ಮಾಡಿ ಜೀವ ಉಳಿಸಬಹುದಾಗಿದೆ. ಈ ಹಸುವು ಅತ್ಯಂತ ರಕ್ತಹೀನತೆಯಿಂದ ಬಳಲುತ್ತಿತ್ತು. ಜೀವ ಉಳಿಸುವುದು ಅತ್ಯಂತ ಸವಾಲಿನದ್ದಾಗಿತ್ತು. ರಕ್ತಾಂಶವು ಇರಬೇಕಾದದ್ದಕ್ಕಿಂತ ಕೇವಲ 14% ನಷ್ಟಿತ್ತು. ರಕ್ತವರ್ಗಾವಣೆಯ ನಂತರ ಹಸುವು ಚೇತರಿಸಿಕೊಂಡಿದೆ” ಎಂದರು.

ಹಸುವಿನ‌ ಮಾಲಿಕರಾದ ವಿಶ್ವನಾಥ್ ರವರು ಮಾತನಾಡಿ ಹಸುವು ಕತ್ತನ್ನೂ ಎತ್ತದೆ, ಏಳಲೂ ಆಗದೆ ಉಸಿರಾಡಲೂ ಕಷ್ಟಪಡುವುದನ್ನು ನೋಡಿ ಅಸುನೀಗುವುದೆಂದು ಭಾವಿಸಿದ್ದೆವು‌. ಆದರೆ ಪಶುವೈದ್ಯರ ಪರಿಶ್ರಮದಿಂದ ಹಸುವು ಬದುಕುಳಿಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss