Wednesday, August 10, 2022

Latest Posts

ಸಾವಿರ ಮಿಣುಕು ಹುಳಗಳ ಮಧ್ಯೆ ಸದ್ದಿಲ್ಲದೆ ಹೊಳೆಯುವ ಸ್ನಿಗ್ಧ ನಕ್ಷತ್ರ ಅಪ್ಪ

ಈಗಷ್ಟೆ ಬೆಂಗಳೂರು ರಾತ್ರಿಯ ಎರಡನೇಯ ಜಾವಕ್ಕೆ ಕಾಲಿಡುತ್ತಿದೆ. ದೇವರು ಕೂಡ ನಿದ್ದೆ ಹೋಗಿ ಜಗತ್ತಿನ ಮೇಲೊಂದು ಹಿತವಾದ ನಿಶಬ್ದ. ಇಡೀ ಪೇಟೆ  ಕತ್ತಲನ್ನು ಹೊದ್ದು ಮಲಗಿದೆ. ಇವತ್ತು ನಾನು ಮಾತ್ರ ಜಾಗರಣೆಯ ರಾಣಿ. ನಿದ್ರೆ ನನ್ನ ಹತ್ತಿರಕ್ಕೂ ಸುಳಿಯುತ್ತಿಲ್ಲ. ಸಣ್ಣಗೆ ಕಿಟಕಿ ತೆರೆದು ಅತಿ ಹಿತವೆನ್ನಿಸುವಂತೆ ಬೀಸಿ ಬರುತ್ತಿದ್ದ ಗಾಳಿಗೆ ಮುಖವೊಡ್ಡಿ ಕುಳಿತಿರುವೆ. ಕಿವಿಗೆ ಕೇಳುತ್ತಿರುವ ‘ಚೌಕ’ ಸಿನಿಮಾದ ‘ಅಪ್ಪ ಐ ಲವ್‌ ಯು ಅಪ್ಪ..’ ಹಾಡು ಊರಲ್ಲಿರುವ ನನ್ನ ಅಪ್ಪನನ್ನು ನೆನಪು ಮಾಡಿಸುತ್ತಿದೆ. ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು ಹೊರಳಿತು.
ಪ್ರತಿ ಹೆಣ್ಣಿನ ಜೀವನದಲ್ಲೂ ಅದೆಷ್ಟೋ ಪುರುಷ ಪಾತ್ರಗಳು ಬಂದು ಹೋಗುತ್ತವೆ. ಆದರೆ ಅವಳಿಗೆ ಎಲ್ಲಾ ಪಾತ್ರಗಳಿಗಿಂತ ವಿಶೇಷವಾದಂತಹದ್ದು ತಂದೆಯ ಪಾತ್ರ ಮಾತ್ರ. ಅವಳಿಗೆ ಅಪ್ಪ ಬರಿ ಎರಡಕ್ಷರದ ಪುರುಷನಲ್ಲ. ಪ್ರೀತಿಯ ಕಣಜ. ಕತ್ತಲ ದಾರಿಗೆ ದೀಪವಾಗುವ ದಾರಿಹೋಕ. ಒಡಲ ತುಂಬೆಲ್ಲ ದುಃಖ ತುಂಬಿಕೊಂಡು ತುಟಿಯಂಚಲಿ ನಗು ಚೆಲ್ಲುವ ಮನ್ಮಥ. ತನ್ನ ಕಪ್ಪು ಬದುಕಿನ ಮಧ್ಯೆ ಮಕ್ಕಳಿಗೆ ಬಣ್ಣ ಬಣ್ಣದ ಬದುಕು ಕಟ್ಟಿಕೊಡುವ ಕರ್ಣ. ಮನೆಯವರೆಲ್ಲರ ತುತ್ತಿಗಾಗಿ ಮೈ ಸುಲಿಯುವಂತೆ ದುಡಿಯುವ ಕೂಲಿಕಾರ. ನನಗೆ ಅಪ್ಪ ಎನ್ನುವ ಗಂಡು ಜೀವ ಬೆಲೆ ಕಟ್ಟಲಾಗದಂತಹ ಬಂಧು, ಭಾವಗಳ ರಾಶಿ. ಸಾವಿರ ಮಿಣುಕು ಹುಳಗಳ ಮಧ್ಯೆ ಸದ್ದಿಲ್ಲದೆ ಹೊಳೆಯುವ ಸ್ನಿಗ್ಧ ನಕ್ಷತ್ರ.
ಈಗ ನಮ್ಮ ಮನೆಗೊಬ್ಬ ಹೊಸ ಅತಿಥಿ ಬಂದಿದ್ದಾನೆ. ಅಪ್ಪನ ಮೂಗಿನ ಮೇಲೊಂದು ಕನ್ನಡಕ ಬಂದು ಕೂತಿದೆ. ಮುದ್ದಿಸುತ್ತಿದ್ದ ಅಪ್ಪ ಮೂಲೆ ಸೇರುವ ಹೊತ್ತು ಹತ್ತಿರ ಬರುತ್ತಿದೆ. ಏಕೆಂದರೆ ಅಪ್ಪನಿಗೆ ವಯಸ್ಸಾಗುತ್ತಿದೆ. ಅಪ್ಪ ಈಗ 60‌ರ ಮುದಿ  ಪ್ರಾಯದಲ್ಲಿದ್ದಾನೆ. ಬೆನ್ನಿಗೆ ನಾನೂ ಬೆಳೆದು ನಿಂತಿದ್ದೇನೆ. ಎಷ್ಟೆಂದರೆ ಅಪ್ಪನಿಗೆ ತಿರುಗಿ ಮಾತನಾಡುವಷ್ಟು ಬೆಳೆದು ಬಿಟ್ಟಿದ್ದೇನೆ.
ಎಲ್ಲ ಅಪ್ಪಂದಿರಂತೆ ನನ್ನ ಅಪ್ಪ ಒಂದು ದಿನವೂ ನನ್ನನ್ನು ಮುದ್ದು ಬಂಗಾರಿ, ಜಾಣೆ, ಕಂದ, ಗಿಣಿಮರಿ ಎಂದು ಮುದ್ದು ಮಾಡಿದವನಲ್ಲ. ತನ್ನೆಲ್ಲ ಪ್ರೀತಿಯನ್ನೂ ಎದೆಯೊಳಗೆ ಹುದುಗಿ ಕೊಂಡು ಎದುರು ಗದರುವ ಮೀಸೆ
ಗಾರನಾಗಿಯೇ ಇದ್ದಾನೆ. ಹೆಸರೇ ಇರದ ಬಾವುಕನೊಬ್ಬ ಅವನೊಳಗಿದ್ದಾಗೆ. ಆ ವ್ಯಕ್ತಿ ಕೆಲವೊಮ್ಮೆ ಮಾತ್ರ ಕಾಣಿಸುತ್ತಾನೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿ ಬರಿಗೈಲಿ ಅಪ್ಪನೆದುರು ನಿಂತಾಗ ನನ್ನ ಬರಿಗೈಗೆ ಬೊಗಸೆ ತುಂಬ ದೈರ್ಯ ತುಂಬಿ, ಬೆನ್ನು ತಟ್ಟಿ ಭವಿಷ್ಯದ ದಾರಿ ತೋರಿಸಿಕೊಟ್ಟ. ಪಿಯುಸಿ, ಪದವಿ, ಸ್ನಾತಕೋತ್ತರದಲ್ಲಿ ಕಾಲೇಜಿನಲ್ಲಿ ಮೊದಲ ಸ್ಥಾನ ಪಡೆದಾಗ ಒಳಗೊಳಗೆ ಹಿಗ್ಗಿ ಮೀಸೆ ತಿರುವಿದ. ಅವತ್ತು ಸೋತು ಕೈ ಕಟ್ಟಿ ಕುಸಿದವಳಿಗೆ ಬದುಕನ್ನೇ ಗೆಲ್ಲುವಂತೆ ಮಾಡಿದ್ದು ಕೇವಲ ಅಪ್ಪ ಮಾತ್ರ.
ಅಪ್ಪನೊಂದಿಗೆ ಕಳೆದಿರುವ ಕೆಲವೊಂದು ಅದ್ಭುತವಾದ ಸಂತೋಷದ ನೆನಪುಗಳನ್ನು ಪುಟ್ಟ ಜೋಳಿಗೆಯ ತುಂಬೆಲ್ಲ ತುಂಬಿಕೊಂಡಿದ್ದೇನೆ. ನಿಮ್ಮೆದುರು ಹೇಳ ಹೊರಟರೆ ಅಂತ್ಯವೇ ಇಲ್ಲ. ಅಪ್ಪ ಎತ್ತಿಕೊಂಡರೆ ಕಾಲು ನೆಲಕ್ಕೆ ತಾಗುತ್ತಿತ್ತು, ಅಷ್ಟು ದೊಡ್ಡವಳಾಗುವವರೆಗೂ ನಾನು ಅಡುಗೆ ಒಲೆಯ ಮುಂದೆಯೇ ನಿದ್ದೆ ಮಾಡುತ್ತಿದ್ದೆ. ಅಪ್ಪನೆ ಎತ್ತಿಕೊಂಡು ಹಾಸಿಗೆಯಲ್ಲಿ ಮಲಗಿಸಿ ನೆತ್ತಿ ಸವರುತ್ತಿದ್ದಿದ್ದು, ಅದೆಷ್ಟೋ ಭಾರಿ ಅಪ್ಪ ಎತ್ತಿಕೊಳ್ಳಲೆಂದೇ ನಾಟಕದ ನಿದ್ದೆ ಮಾಡುತ್ತಿದ್ದೆ. ಅಮ್ಮ, ಅಜ್ಜನ ಮನೆಗೆ ಹೋದಾಗ ಬೈತೆಲೆ ತೆಗೆದು ಎರಡು ಜಡೆ ಹಾಕಿ ಶಾಲೆಗೆ ಕಳುಹಿಸಿದ್ದು, ನಾಗರ ಪಂಚಮಿ ಹಿಂದಿನ ರಾತ್ರಿಯಿಡಿ ಕುಳಿತು ಮದರಂಗಿ ಹಚ್ಚಿಸಿಕೊಂಡಿದ್ದು, ನನಗೆ ಕೋಲಿಡಿದು ಹೊಡೆಯಲು
ಬಂದ ಅಮ್ಮನಿಗೆ ಅದೇ ಕೋಲಿನಿಂದ ಅಪ್ಪ ಹೆದರಿಸಿದಾಗ ಕೊಟ್ಟಿಗೆ ತುಂಬಾ ನಾನು ಕುಣಿದಿದ್ದು, ಹುಣಸೆಹಣ್ಣಿನ ಮುದ್ದೆಯನ್ನು ಬೆಲ್ಲದ ಉಂಡೆ ಎಂದು ಸುಳ್ಳು ಹೇಳಿ ಅಪ್ಪಂಗೆ ತಿನ್ನಿಸಿ ಮಂಗ ಮಾಡಿದ್ದು. ಇದಾವುದನ್ನೂ ನಾನು ಮರೆತಿಲ್ಲ.
ನನಗೆ ನಾಳೆ ಕಾಲೇಜ್ ಡೇ ನನಗೊಂದು ಗ್ರ್ಯಾಂಡ್‌ ಡ್ರೆಸ್ ಬೇಕು. ದೀಪಾವಳಿಗೆ ರೇಷ್ಮೆ ಸೀರೆಯೇ ಬೇಕು. ರೆಡ್ಮಿ ಮೊಬೈಲ್, ಡೆಲ್ ಲ್ಯಾಪ್‌ಟಾಪ್ ಬೇಕು. ಎಂ.ಎ. ಮಾಡತೀನಿ ಮೂರು ದಿನದೊಳಗೆ 50 ಸಾವಿರ ದುಡ್ಡು ಬೇಕು. ದುಡ್ಡು ಕೊಡದಿದ್ದರೆ ಊಟ ಬಿಡುತ್ತೇನೆ. ನನ್ನ ಇಂತಹ ಬೇಕು ಬೇಡಗಳ ಮಧ್ಯೆ ಅಪ್ಪ ಅವನ ಬೇಕುಗಳನೆಲ್ಲ ಮರೆತು ಬಿಟ್ಟು, ಕೇಳಿದ್ದೆಲ್ಲ ಕೊಡಿಸಿದ. ತಾನು ಮಾತ್ರ ಅದೇ ಹಳೇ ಪ್ಯಾಂಟನ್ನು ಮೂಲೆಯಲ್ಲಿ ಕುಳಿತು ಹೊಲಿದು ಕೊಳ್ಳುತ್ತಾನೆ.  ಬರಗಾಲದ ಭೂಮಿಯಂತೆ ಸೀಳು ಬಿಟ್ಟ ಪಾದದಲ್ಲಿ ಅಪ್ಪ ಕಷ್ಟಪಟ್ಟು ನಡೆಯುತ್ತಿದ್ದರೆ, ಉಗುರುಗಳಿಗೆ ಬಣ್ಣವನ್ನು ಮೆತ್ತಿಕೊಂಡು ಶೋಕಿ ಮಾಡುತ್ತೀನಿ ನಾನು. ಸಕ್ಕರೆಯೇ ಇಲ್ಲದ ಪಾಯಸ ಅಪ್ಪನ ಜೀವನ.
ಅವತ್ತು ಮನೆತುಂಬ ಸಂಭ್ರಮ ತುಂಬಿತ್ತು. ಆಗಷ್ಟೆ ಅಕ್ಕನ ಮದುವೆ ಮುಗಿ
ದಿತ್ತು. ಅಪ್ಪ ಮಾತ್ರ ಮಂಕಾಗಿದ್ದ. ‘ಅಪ್ಪ ನಾನೂ ಬರುತ್ತೀನಿ ಅಂತ ರಂಪ ಮಾಡುತ್ತಿದ್ದವಳು ಇಂದು ಹೋಗಿ ಬರುತ್ತೀನಿ ಅಪ್ಪಾ ಅಂತಿದ್ದಾಳೆ. ತನ್ನ ಕೈ ಬೆರಳು ಹಿಡಿದುಕೊಳ್ಳುತ್ತಿದ್ದ ಕೈಗಳು ಇಂದು ಮದರಂಗಿಯಿಂದ ಕೆಂಪಾಗಿದೆ. ನನ್ನ ಗಟ್ಟಿಯಾಗಿ ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದಾಗ ಹೆಜ್ಜೆಯ ನಾದಕ್ಕೆ ಕಂಪಿಸುತ್ತಿದ್ದೆ. ಆದರೆ ಇಂದು ಗಂಡನ ಕೈ ಹಿಡಿದು ಸಪ್ತಪದಿ ತುಳಿದಾಗ ಮಾತ್ರ…’ ಹೇಳುತ್ತಾ ಅಮ್ಮನೆದುರು ಕಣ್ಣೀರಾಗಿಬಿಟ್ಟಿದ್ದ. ಕೆಲವೇ ವರ್ಷ ಇನ್ನೊಂದು ಮಗಳನ್ನು ಮತ್ತೆ ಹೀಗೇ ಕಳುಹಿಸಬೇಕು ಎನ್ನುತ್ತಾ ಮತ್ತಷ್ಟು ಭಾವಕನಾಗಿಬಿಟ್ಟ. ಆಗ ನಾನು ಅಕ್ಷರಶಃ ಕಣ್ಣೀರಾಗಿ ಬಿಟ್ಟೆ. ಅಪ್ಪ ಅತ್ತಿದ್ದು ಅವತ್ತೇ ಮೊದಲ ಸಲ ನಾನು ನೋಡಿದ್ದು.ಇವುಗಳನ್ನು ಅಪ್ಪನ ಕೈ ಹಿಡಿದು ಮಡಿಲಲ್ಲಿ ತಲೆ ಇಟ್ಟು ಮಲಗಿ ಪುಟ್ಟ ಹುಡುಗಿಯಂತೆ ಅಳುತ್ತ ಹೇಳುವ ಆಸೆ. ಆದರೆ ಆಗುತ್ತಿಲ್ಲ.
ನಮಗೆ ತುತ್ತು ಕೊಡುವ ಅಮ್ಮಗ್ರೇಟ್ ಅನಿಸುತ್ತಾಳೆ. ತುತ್ತು ಸಂಪಾದಿಸುವ ಅಪ್ಪ ಯಾಕೆ ಗ್ರೇಟ್ ಆಗೊದೇ ಇಲ್ಲ? ಅವನು ಎಲ್ಲರಿಗೂ  ಬೆದರು ಬೊಂಬೆ ಅಷ್ಟೆ…
-ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss