ಕಲಬುರಗಿ: ಮೂರುವರೆ ದಶಕದ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಗುರುವಾರ ಕೆಲ ಅಪ್ರಸ್ತುತ ಪ್ರಸಂಗ ನಡೆದವು.
ಪೂರ್ವನಿರ್ಧಾರಿತವಾಗಿದ್ದ ಕೆಲ ಗೋಷ್ಠಿಗಳು ವಿಷಯಾಂತರ ವಾದದ್ದಲ್ಲದೇ, ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋಗಿದ್ದು ವಿಪರ್ಯಾಸ. ಸಾಲದ್ದಕ್ಕೆ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮನು ಬಳಿಗಾರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂಬ ಆಗ್ರಹವೂ ಕೇಳಿ ಬಂತು. ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಡಾ.ಚನ್ನಣ್ಣ ವಾಲೀಕರ ಸಮಾನಂತರ ವೇದಿಕೆಯಲ್ಲಿ ಕಲಬುರಗಿ ಜಿಲ್ಲಾ ದರ್ಶನ ಎಂಬ ವಿಷಯದ ಕುರಿತು ಗೋಷ್ಠಿ ಆಯೋಜಿಸಲಾಗಿತ್ತು.
ಗೋಷ್ಠಿಯಲ್ಲಿ ಉಪನ್ಯಾಸಕರೆಲ್ಲರೂ ತಮಗೆ ನೀಡಿದ್ದ ವಿಷಯ ಮಂಡಿಸಿದರಲ್ಲದೆ, ಕಲಬುರಗಿ ಸಮಗ್ರ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದರು. ಆದರೆ, ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ಆರ್.ಹುಡುಗಿ, ಸಮ್ಮೇಳನ ಮುಗಿದ ಕೂಡಲೇ ಮನು ಬಳಿಗಾರ್ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಬಲವೂ ಅಲ್ಲದ, ಎಡವೂ ಅಲ್ಲದ ಅವರೆಲ್ಲಿಯವರು? ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾತಿನಂತೆ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಿರುವ ಬಗ್ಗೆ ಅನುಮಾನವಿದೆ ಎಂದರು. ಇಷ್ಟಾದರೂ ವೇದಿಕೆ ಮೇಲಿದ್ದ ಗಣ್ಯರಾಗಲಿ, ಮುಂಭಾಗದಲ್ಲಿದ್ದ ಸಭಿಕರಾಗಲಿ ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ.
ಇನ್ನು ಸ್ತ್ರೀಲೋಕ ತಲ್ಲಣಗಳು ಕುರಿತು ಗೋಷ್ಠಿಯಲ್ಲಿ ಮಹಿಳೆ ಮತ್ತು ಪ್ರಭುತ್ವದ ಬಗ್ಗೆ ವಿಷಯ ಮಂಡಿಸಿದ ಡಾ.ಆರ್.ಪೂರ್ಣಿಮಾ ಹಾಗೂ ಅಧ್ಯಕ್ಷತೆ ವಹಿಸಿದ್ದ ಬಿ.ಟಿ.ಲಲಿತಾ ನಾಯಕ್ ಅವರು ಎನ್ ಆರ್ ಸಿ , ಸಿಎಎ ವಿರುದ್ಧದ ಪ್ರತಿಭಟನಾ ವಿಷಯ ಪ್ರಸ್ತಾಪಿಸಿದರು.
ಕೃಷಿ ಮತ್ತು ನೀರಾವರಿ ಸಂಬಂಧಿತ ಗೋಷ್ಠಿಯಲ್ಲಿ ತೊಗರಿ ಬೆಳೆಯ ಬಗ್ಗೆ ಪ್ರಸ್ತಾಪಿಸಿಲ್ಲ ಎಂಬ ಕಾರಣಕ್ಕೆ ಸಭಿಕರ ಮಧ್ಯೆ ಕುಳಿತಿದ್ದ ಮಾರುತಿ ಮಾನ್ಪಡೆ ಅಧ್ಯಕ್ಷೀಯ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು.