ಮಂಗಳೂರು: ಗೋ ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಪೊಲೀಸ್ ಆಯುಕ್ತರು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು, ಅಕ್ರಮ ಗೋ ಸಾಗಾಟ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಮೂಡಬಿದಿರೆಯ ಶಿರ್ತಾಡಿಯಲ್ಲಿ ಭಾನುವಾರ ಮುಂಜಾನೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಗೋ ಕಳ್ಳರ ಬೆನ್ನು ಬಿದ್ದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ 6 ಗೋವುಗಳನ್ನು ರಕ್ಷಿಸಿದೆ.
ಗೋ ಕಳ್ಳರು ಕಾರಿನಲ್ಲಿ ಗೋವುಗಳನ್ನು ನಿರ್ದಯವಾಗಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರು ನಿಲ್ಲಿಸಲು ಮುಂದಾಗಿದ್ದಾರೆ.
ಆದರೆ ಗೋ ಕಳ್ಳರು ಕಾರು ನಿಲ್ಲಿಸದೆ ಚಲಾಯಿಸಿದ್ದಾರೆ. ಇದನ್ನು ಬೆನ್ನತ್ತಿದ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಗೋ ಕಳ್ಳರು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಮೂಡುಬಿದ್ರೆಯ ಶಿರ್ತಾಡಿ ಬಳಿಯ ಔದಾಲ್ ಎಂಬಲ್ಲಿ ಈ ಘಟನೆ ನಡೆದಿದೆ. ಬಳಿಕ ಪೊಲೀಸರು ಕಾರಿನಲ್ಲಿದ್ದ 6 ಗೋವುಗಳನ್ನು ರಕ್ಷಿಸಿದ್ದು, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.